ಶಿರಾ :
ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದರೂ ಕೂಡ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಮಿತಿ ಮೀರುತ್ತಿದೆ. ಬಡ್ಡಿ ದಂಧೆಕೋರರ ಹಾವಳಿಗೆ ಅಮಾಯಕ ಜೀವಿಗಳು ಬಲಿಯಾಗುತ್ತಿವೆ. ಸುಗ್ರೀವಾಜ್ಞೆಗೂ ಕೇರ್ ಮಾಡದ ಫೈನಾನ್ಸ್‌ಗಳು ಸಾಲ ಪಡೆದವರ ಮೇಲೆ ದಬ್ಬಾಳಿಕೆ ಮುಂದುವರೆಸುತ್ತಲೇ ಇದ್ದಾರೆ. ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ಇಂದು ಮತ್ತೊಂದು ಜೀವ ಬಲಿಯಾಗಿದೆ. ಶಿರಾ ತಾಲೂಕಿನ ಚಿಕ್ಕನಕೋಟೆ ಗ್ರಾಮದಲ್ಲಿ ಸಾಲದ ಶೂಲಕ್ಕೆ ಮಹಿಳೆಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಿರಾ ತಾಲೂಕಿನ ಚಿಕ್ಕನಕೋಟೆ ಗ್ರಾಮದ 39 ವರ್ಷದ ಲೀಲಾವತಿ ಎಂಬುವವರು ಮೈಕ್ರೋ ಫೈನಾನ್ಸ್‌ಗಳ ನಿರಂತರ ಕಿರುಕುಳದಿಂದ ಬೇಸತ್ತು ನೇಣಿಗೆ ಶರಣಾಗಿದ್ದಾರೆ. ಲೀಲಾವತಿ ಕುಟುಂಬ ಮೈಕ್ರೋ ಫೈನಾನ್ಸ್ ಕಂಪನಿಯೊಂದರಲ್ಲಿ ಸಾಲವನ್ನು ಪಡೆದುಕೊಂಡಿದ್ದರು. ಆದರೆ ಸಾಲ ವಸೂಲಿ ಏಜೆಂಟ್‌ಗಳು ನಿತ್ಯ ಮನೆ ಹತ್ತಿರ ಬಂದು ಸಾಲ ಕಟ್ಟುವಂತೆ ಪೀಡಿಸುತ್ತಿದ್ದರು. ಸಾಲ ಕಟ್ಟುತ್ತೇವೆ ಅಂತಾ ಹೇಳಿದರೂ ಬಿಡದ ಮೈಕ್ರೋ ಫೈನಾನ್ಸ್ ಏಜೆಂಟ್‌ಗಳು ಪೀಡಿಸುತ್ತಲೇ ಇದ್ದರು ಇದರಿಂದ ಇಡೀ ಕುಟುಂಬ ಮಾನಸಿಕವಾಗಿ ನೊಂದಿತ್ತು. ಮನೆಯಲ್ಲಿ ಯಾರು ಇಲ್ಲದ ವೇಳೆ ಲೀಲಾವತಿ ನೇಣಿಗೆ ಕೊರಳೊಡ್ಡಿದ್ದಾರೆ. ತಾಯಿಯನ್ನು ಕಳೆದುಕೊಂಡ ಮಕ್ಕಳು ಹಾಗೂ ಆಕೆಯ ಪತಿ ಕಣ್ಣೀರುಹಾಕುತ್ತಿದ್ದಾರೆ. ಈ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
ಮೈಕ್ರೋ ಫೈನಾನ್ಸ್ ಭೂತ ಇಡೀ ರಾಜ್ಯವನ್ನೇ ತಲ್ಲಣಿಸುವಂತೆ ಮಾಡಿದೆ. ಸುಗ್ರೀವಾಜ್ಞೆ ಜಾರಿ ತಂದರೂ ಕೂಡ ಕಿರುಕುಳ ಕೊಡೋದನ್ನು ಮುಂದುವರೆಸಿದ್ದು, ಇನ್ನು ಅದೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕೋ. ಇನ್ನಾದರೂ ಮೈಕ್ರೋ ಫೈನಾನ್ಸ್ ಹಾವಳಿಗೆ ಸರ್ಕಾರ ಕಟ್ಟುನಿಟ್ಟಿನ ಜಾರಿ ತರಲೇಬೇಕಿದೆ.