ಬೆಂಗಳೂರು : ಅರಣ್ಯ ಸಂರಕ್ಷಣೆ ಹಾಗೂ ಪರಿಸರ ಜಾಗೃತಿಗೆ ಮತ್ತೊಂದು ಪ್ರಮುಖ ಹೆಜ್ಜೆ ಇಡಲಾಗಿದ್ದು, ಖ್ಯಾತ ಕ್ರಿಕೆಟಿಗ ಮತ್ತು ಮಾಜಿ ಭಾರತ ತಂಡದ ನಾಯಕ ಅನಿಲ್ ಕುಂಬ್ಳೆ ಅವರನ್ನು ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನಾಮನಿರ್ದೇಶಿಸಲಾಗಿದೆ.
ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯ ಹಿತಾಸಕ್ತಿಯಿಂದ ಮತ್ತು ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇತ್ತೀಚೆಗೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವು, ವನ್ಯಜೀವಿಗಳ ಮೇಲಿನ ಅವರ ಕಾಳಜಿಯು ಹಾಗೂ ಸಾಮಾಜಿಕ ಸೇವೆಯಲ್ಲಿ ಅವರು ಹೊಂದಿರುವ ನಿಷ್ಠೆಯಿಂದ ಅವರನ್ನು ಆಯ್ಕೆ ಮಾಡಲಾಗಿದೆ.
ಇನ್ನು ರಾಜ್ಯ ಸರ್ಕಾರ ಪ್ರಕಟಿಸಿರುವ ಮಾಹಿತಿಯಂತೆ, ಅನಿಲ್ ಕುಂಬ್ಳೆ ಅವರು ಯಾವುದೇ ಸಂಭಾವನೆ ಪಡೆಯದೆ, ಸಂಪೂರ್ಣವಾಗಿ ಸಮಾಜಮುಖಿ ಉದ್ದೇಶದಿಂದ ಈ ಜವಾಬ್ದಾರಿಯನ್ನು ನಿರ್ವಹಿಸಲು ಸಮ್ಮತಿಸಿರುವುದು ಹೆಮ್ಮೆಯ ವಿಷಯವಾಗಿದೆ. ರಾಜ್ಯ ಸರ್ಕಾರ ಈ ನೇಮಕಾತಿಯ ಮೂಲಕ ಅರಣ್ಯ ಸಂರಕ್ಷಣೆ, ವನ್ಯಜೀವಿ ರಕ್ಷಣೆ ಮತ್ತು ಪರಿಸರ ಜಾಗೃತಿಗೆ ಹೊಸ ದಿಕ್ಕು ಹಾಗೂ ಚೈತನ್ಯ ದೊರೆಯಲಿದೆ ಎಂಬ ಭರವಸೆ ವ್ಯಕ್ತಪಡಿಸಿದೆ. ಇನ್ನು ಅನಿಲ್ ಕುಂಬ್ಳೆ ಅವರನ್ನು ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನಾಮ ನಿರ್ದೇಶನ ಮಾಡಲಾಗುವುದುʼ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಅರಣ್ಯ ಸಚಿವ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.
ಅನಿಲ್ ಕುಂಬ್ಳೆಯಂತಹ ಖ್ಯಾತ ವ್ಯಕ್ತಿಯ ತೊಡಗಿಸಿಕೊಂಡು ಪರಿಸರ ಸಂರಕ್ಷಣೆಯ ಕಾರ್ಯಗಳಲ್ಲಿ ಪಾಲ್ಗೊಳ್ಳುವ ನಿರ್ಧಾರದಿಂದ ಸಾರ್ವಜನಿಕರ ಮಧ್ಯೆ ಹೆಚ್ಚಿನ ಜಾಗೃತಿ ಮೂಡಿಸುವ ಸಾಧ್ಯತೆ ಇದ್ದು, ನಿಸರ್ಗ ಸಂರಕ್ಷಣೆಗೆ ಇದು ಶಕ್ತಿಶಾಲಿ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ಎಲ್ಲೆಡೆ ವ್ಯಕ್ತವಾಗಿದೆ.