ಸಿನಿಮಾ : ಕಮಲ್‌ ಹಾಸನ್‌‌ಗೆ ನಟ ಜಗ್ಗೇಶ್ ತಿರುಗೇಟು

JAGESH TWEET : "ಉಳಗನಾಯಕನ್" ಖ್ಯಾತಿಯ ದಿಗ್ಗಜ ನಟ ಕಮಲ್ ಹಾಸನ್ ಅವರು ನೀಡಿರುವ ಭಾಷಾ ಸಂಬಂಧಿ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಕನ್ನಡ ನಾಡಿನೆಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

'ಥಗ್ ಲೈಫ್' ಚಿತ್ರದ ಪ್ರೋಮೋಶನ್ ಕಾರ್ಯಕ್ರಮ ಕಳೆದ ವಾರ ಬೆಂಗಳೂರು ನಗರದಲ್ಲಿ ಜರಗಿದ ವೇಳೆ, ವೇದಿಕೆಯಲ್ಲಿ ಕಮಲ್ ಹಾಸನ್ ಮಾತನಾಡುತ್ತಾ "ನಿಮ್ಮ ಕನ್ನಡ ನಮ್ಮ ತಮಿಳಿನಿಂದ ಬಂದ ಭಾಷೆ" ಎಂಬ ಹೇಳಿಕೆಯನ್ನು ನೀಡಿದ್ದರು. ಈ ವೇಳೆ ನಟ ಶಿವರಾಜ್ ಕುಮಾರ್ ಕೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಹೇಳಿಕೆಯ ಬಳಿಕ ರಾಜ್ಯದ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಜನ ಸಾಮಾನ್ಯರು ಕಮಲ್ ಹಾಸನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಹೇಳಿಕೆಯನ್ನು ತಕ್ಷಣ ವಾಪಸ್ ಪಡೆಯಬೇಕು ಮತ್ತು ಕನ್ನಡಿಗರ ಮುಂದೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. "ಥಗ್ ಲೈಫ್" ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ಎಚ್ಚರಿಕೆ ನೀಡಲಾಗಿದ್ದು, ಈ ವಿವಾದಕ್ಕೆ ಕೊನೆ ಇಲ್ಲದಿದ್ದರೆ ಚಿತ್ರ ಬಿಡುಗಡೆಗೆ ತಡೆಯು ನಿಶ್ಚಿತವಿದೆ ಎಂದು ಸಂಘಟನೆಗಳು ಸ್ಪಷ್ಟ ಸಂದೇಶಗಳನ್ನು ನೀಡಿದೆ.

ಈ ಕುರಿತು ನಟ ಮತ್ತು ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಕೂಡ ತಮ್ಮ 'X' (ಹಿಂದೆ ಟ್ವಿಟ್ಟರ್) ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಿದ್ದಾರೆ. "ಕಲೆಗೆ ಜಾತಿ ಇಲ್ಲ. ಎಲ್ಲ ಭಾಷೆಯ ಕಲಾವಿದರು ಶಾರದಾಸುತರು ಎನ್ನುವುದರಲ್ಲಿ ನಾವು ಒಪ್ಪುತ್ತೇವೆ. ಆ ನಿಟ್ಟಿನಲ್ಲಿ ಕಮಲ್ ಹಾಸನ್ ರವರ ಕಲೆಯನ್ನು ಮೆಚ್ಚಿದ್ದೇವೆ. ಅಂದ ಮಾತ್ರಕ್ಕೆ ಕನ್ನಡ ತಮಿಳಿನಿಂದ ಹುಟ್ಟಿದೆ ಅನ್ನೋ ಮಾತು ಒಪ್ಪಲಾಗದು. ಕನ್ನಡಕ್ಕೆ 2.5 ಸಾವಿರ ವರ್ಷಗಳ ಇತಿಹಾಸವಿದೆ. ಹನುಮದೇವರು ಕೂಡ ಕನ್ನಡ ಭಾಷೆ ಕಲಿಪುಂಗವ. ರಾಮಾಯಣ ಕಾಲದ ಇತಿಹಾಸ ಇದೆ. ಇಷ್ಟು ಅರ್ಥವಾದರೆ ಸಾಕಲ್ಲವೇ ಸಾರ್?" ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

 

Author:

...
Keerthana J

Copy Editor

prajashakthi tv

share
No Reviews