ವಾಹನಗಳುತುಮಕೂರು
ತುಮಕೂರು: ತುರುವೇಕೆರೆ ಪಟ್ಟಣದಲ್ಲಿ ನಿಲ್ಲಿಸಲಾಗಿದ್ದ ಕ್ಯಾಂಟರ್‌ಗಳ ಬ್ಯಾಟರಿಗಳನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ನೆನ್ನೆ ರಾತ್ರಿ ನಡೆದಿದೆ.
ತುರುವೇಕೆರೆ ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ಪೊಲೀಸ್ ಠಾಣೆಯ ಮುಂಭಾಗದ ಪೆಟ್ರೋಲ್ ಬಂಕ್ ಹಿಂಭಾಗ ನಿಲ್ಲಿಸಿದ್ದ ಏಳು ವಾಹನಗಳ ಬ್ಯಾಟರಿಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಒಟ್ಟು ಐದು ಕ್ಯಾಂಟರ್ ಗಳು ಹಾಗೂ ಎರಡು ಕ್ರೇನ್ ಗಳ ಬ್ಯಾಟರಿಗಳನ್ನು ಕಳ್ಳರು ಕದ್ದಿದ್ದು, ಬ್ಯಾಟರಿಗಳ ವೈರ್ ಗಳನ್ನು ಕತ್ತರಿಸಿ ಬ್ಯಾಟರಿಗಳನ್ನು ಹೊತ್ತೊಯ್ದಿದ್ದಾರೆ. ಇನ್ನು ಈ ವಾಹನಗಳು ರಂಗೇಗೌಡ, ದಾದಾಪೀರ್, ಚಿದಾನಂದ, ರಮೇಶ್, ಶಶಿ, ತಸ್ಕಿನ್, ಕೃಷ್ಣಪ್ಪ ಎಂಬುವರಿಗೆ ಸೇರಿದೆ. ತುರುವೇಕೆರೆ ಪೊಲೀಸ್ ಠಾಣೆಯ ಬಳಿಯೇ ಈ ಘಟನೆ ನಡೆದಿರುವುದು ಸಾರ್ವಜನಿಕರಿಗೆ ಅಚ್ಚರಿಯನ್ನು ಮೂಡಿಸಿದೆ.
ಪೆಟ್ರೋಲ್ ಬಂಕ್ ಅಕ್ಕಪಕ್ಕದಲ್ಲಿಯೇ ಸಿ ಸಿ ಕ್ಯಾಮೆರಾ ಗಳಿದ್ದು, ಅದನ್ನು ಪರಿಶೀಲನೆ ಮಾಡುವ ಸಾಧ್ಯತೆ ಇದೆ. ಈ ಘಟನೆ ಬಗ್ಗೆ ತುರುವೇಕೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಸುಮಾರು ಪ್ರತಿಯೊಂದು ವಾಹನದಲ್ಲೂ ಬ್ಯಾಟರಿ ವೈರು ಸೇರಿದಂತೆ ಒಟ್ಟು ಹತ್ತು ಸಾವಿರ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ. ಒಟ್ಟು 80,000ಕ್ಕೂ ಹೆಚ್ಚು ಮೌಲ್ಯದ ಬ್ಯಾಟರಿಯನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.