ಬೆಂಗಳೂರು:
ಬೆಂಗಳೂರಿನ ಬಳಿ ಬೃಹತ್ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸುವ ಬಗ್ಗೆ ಮಾಹಿತಿಯೊಂದನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನೀಡಿದ್ದಾರೆ. ಬೆಂಗಳೂರು ಬಳಿಯೇ ಮೊಬೈಲ್ ಉತ್ಪಾದನಾ ಕಂಪನಿ ಆರಂಭ ಆಗಲಿದ್ದು, 40,000 ಉದ್ಯೋಗ ಸೃಷ್ಟಿಯಾಗುವ ಗುರಿಯಿದೆ. ಮುಂದಿನ ಬಾರಿ ಬಂದಾಗ ನಾನು ಈ ಕಂಪನಿಗೆ ಭೇಟಿ ನೀಡುತ್ತೇನೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಉತ್ಪಾದನಾ ವಲಯಕ್ಕೂ ಬಜೆಟ್ ಹೆಚ್ಚಿನ ಆದ್ಯತೆ ನೀಡಿದೆ. ಉತ್ಪಾದನಾ ವಲಯದಿಂದಲೇ ಉದ್ಯೋಗ ಸೃಷ್ಟಿ ಆಗುವುದು. ಮೊಬೈಲ್ ಫೋನ್, ಎಲೆಕ್ಟ್ರಾನಿಕ್ಸ್, ಸೆಮಿ ಕಂಡಕ್ಟರ್, ಫೂಟ್ವೇರ್ ಉತ್ಪಾದಕ ವಲಯಗಳಿಗೆ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ. ಕರ್ನಾಟಕ ರೈಲ್ವೆಗೆ ಬಜೆಟ್ನಲ್ಲಿ 7,564 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಯುಪಿಎ ಅವಧಿಯಲ್ಲಿ 850 ಕೋಟಿ ರೂಪಾಯಿ ನೀಡಲಾಗುತ್ತಿತ್ತು. 51,479 ಕೋಟಿಯಷ್ಟು ರೈಲ್ವೇ ವಲಯದಲ್ಲಿ ಬಂಡವಾಳ ಹೂಡಿಕೆ ಮಾಡಲಾಗಿದೆ ಎಂದರು. ಈಗಾಗಲೇ ಕರ್ನಾಟಕದಲ್ಲಿ 10 ವಂದೇ ಭಾರತ್ ರೈಲುಗಳು ಸಂಚರಿಸುತ್ತಿದ್ದು, ಇನ್ನಷ್ಟು ಬರಲಿವೆ. ಉಪನಗರ ರೈಲ್ವೇ ಯೋಜನೆಗೆ 15,762 ಕೋಟಿ ರೂಪಾಯಿ ಕೊಡಲಾಗಿದ್ದು, ಮೆಟ್ರೋಗೆ 15,611 ಕೋಟಿ ರೂಪಾಯಿ ಕೊಡಲಾಗಿದೆ ಎಂದು ಹೇಳಿದರು.
ಬಡ-ಮಧ್ಯಮ ವರ್ಗದ ಮೇಲೆ ಈ ಬಾರಿ ಬಜೆಟ್ನಲ್ಲಿ ಕೇಂದ್ರಿಕರಿಸಲಾಗಿದೆ. ಕಿಸಾನ್ ಸಮ್ಮಾನ್ ನಿಧಿಯಂತಹ ರೈತ ಕಲ್ಯಾಣ ಯೋಜನೆಗಳು ಬದಲಾವಣೆಗೆ ಸಾಕ್ಷಿಯಾಗಿವೆ. ಸಣ್ಣ, ಅತಿ ಸಣ್ಣ ಕೈಗಾರಿಕೆಗಳಿಗೆ ದೊಡ್ಡ ನಿರೀಕ್ಷೆ ಇದ್ದು, ಈಗ ದೇಶ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಸೃಷ್ಟಿಸಿದೆ. ಅಲ್ಲದೆ ಮುಂದಿನ ವರ್ಷದ ವೇಳೆಗೆ ನಮ್ಮ ದೇಶ ಆರ್ಥಿಕತೆಯಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸಲಿದೆ ಎಂದು ಹೇಳಿದರು.
ಈ ಬಾರಿಯ ಬಜೆಟ್ನಲ್ಲಿ ಪ್ರಮುಖ ಅಂಶಗಳು ಘೋಷಣೆಯಾಗಿದ್ದು. ಪ್ರಧಾನಿ ಮೋದಿ ಆರ್ಥಿಕ ಚಿಂತನೆಗಳು ತುಂಬಾ ಬದಲಾವಣೆ ತಂದಿದೆ.
ಕಳೆದ 60 ವರ್ಷದಲ್ಲಾಗದಿರುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಆಗಿದೆ. ಒಂದು ಮತ್ತು 2ನೇ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ ದೇಶದ ಯಾವ ಭಾಗಕ್ಕೆ ಹೋದರೂ ಕಾಣುತ್ತದೆ. 12 ಲಕ್ಷದವರೆಗೆ ತೆರಿಗೆ ಇಲ್ಲದಿರುವುದು ಐಐಎಂ, ಐಐಟಿ ಇದೆಲ್ಲಾ ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗಿದೆ ಎಂದರು.