ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾ ಅಂದ್ರೇನೆ ಹಾಗೆ. ಪ್ರೇಕ್ಷಕರಿಗೆ ಇನ್ನಿಲ್ಲದ ನಿರೀಕ್ಷೆ ಇರುತ್ತೆ. ಇದೂವರೆಗೂ ಉಪ್ಪಿ ನಿರ್ದೇಶಿಸಿದ ಸಿನಿಮಾಗಳನ್ನ ಸಿನಿಪ್ರಿಯರು ಮುಗಿಬಿದ್ದು ನೋಡಿದ್ದಾರೆ. ಉಪೇಂದ್ರ ಕೂಡ ನಿರ್ದೇಶನದ ವಿಚಾರದಲ್ಲಿ ಸಿನಿಪ್ರಿಯರಿಗೆ ಯಾವತ್ತೂ ಮೋಸ ಮಾಡಿಲ್ಲ. ಹೀಗಾಗಿ ಇಲ್ಲಿಯವರೆಗೆ ಉಪೇಂದ್ರ ನಿರ್ದೇಶನ ಮಾಡಿದ ಸಿನಿಮಾಗಳೆಲ್ಲವೂ ಭರ್ಜರಿ ಹಿಟ್ ಆಗಿವೆ. ಇದೀಗ ಉಪ್ಪಿ ನಿರ್ದೇಶನದ 'ಯುಐ' ಸಿನಿಮಾ ರಿಲೀಸ್ ಆಗಿದ್ದು, ಪ್ರೇಕ್ಷಕಪ್ರಭುವಿನ ಮೆಚ್ಚುಗೆಗೆ ಪಾತ್ರವಾಗ್ತಿದೆ.
ಹೌದು…. ನಿನ್ನೆ ರಿಲೀಸ್ ಆಗಿರುವ ಯುಐ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸ್ತಾ ಇದೆ. ಮೊದಲ ದಿನ ಸಿನಿಮಾ ನೋಡಿದ ಮಂದಿಯಿಂದ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಕೆಲವರಿಗೆ ಯುಐ ಸಿನಿಮಾ ಸಿಕ್ಕಾಪಟ್ಟೆ ಇಷ್ಟವಾಗಿದ್ರೆ, ಮತ್ತೆ ಕೆಲವರು ಉಪ್ಪಿ ತಲೆಗೆ ಹುಳ ಬಿಟ್ಟಿದ್ದಾರೆ ಅನ್ನೋ ಅಭಿಪ್ರಾಯ ಹೊರಹಾಕಿದ್ದಾರೆ. ಆದ್ರೆ ಇದೆಲ್ಲದರ ಹೊರತಾಗಿಯೂ ಉಪ್ಪಿ ನಿರ್ದೇಶನದ ಯುಐ ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಕಂಡಿದೆ.
ಉಪೇಂದ್ರ ತಮ್ಮ ಸಿನಿಮಾ ಬಿಡುಗಡೆಗೂ ಮುನ್ನ ಚಿತ್ರದ ಬಗ್ಗೆ ಯಾವ ಸುಳಿವನ್ನು ಬಿಟ್ಟುಕೊಡುವುದಿಲ್ಲ. ಆದ್ರೆ ಈ ಬಾರಿ ಸಿನಿಮಾದ ಸಣ್ಣ ತುಣುಕನ್ನ ವಾರ್ನರ್ ಅನ್ನೋ ಹೆಸರಿನಲ್ಲಿ ರಿಲೀಸ್ ಮಾಡಿದ್ರು. ಒಂದೆರಡು ಹಾಡುಗಳನ್ನ ಕೂಡ ರಿಲೀಸ್ ಮಾಡಿದ್ರು. ಹೀಗಾಗಿ ಸಿನಿಮಾ ಬಗ್ಗೆ ಭಾರೀ ಹೈಪ್ ಕ್ರಿಯೇಟ್ ಆಗಿತ್ತು. ಸಿನಿಮಾ ನೆಕ್ಸ್ಟ್ ಲೆವೆಲ್ ಅಲ್ಲಿರುತ್ತೆ ಅನ್ನೋದು ಸ್ಪಷ್ಟವಾಗಿತ್ತು. ಹೀಗಾಗಿ ಅಡ್ವಾನ್ಸ್ ಬುಕಿಂಗ್‌ನಲ್ಲಿಯೇ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಒಂದು ಅಂದಾಜಿನ ಪ್ರಕಾರ ಯುಐ ಸಿನಿಮಾದ ಮೊದಲ ದಿನದ ಕಲೆಕ್ಷನ್ 8 ರಿಂದ 10 ಕೋಟಿ ರೂಪಾಯಿ ಇರಬಹುದು ಅಂತಾ ಅಂದಾಜಿಸಲಾಗಿತ್ತು. ಇದೀಗ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಹೊರಬಿದ್ದಿದೆ. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಕ್ ಡಾಟ್ ಕಾಂ ಯುಐ ಸಿನಿಮಾದ ಮೊದಲ ದಿನದ ಗಳಿಕೆಯನ್ನ ರಿವೀಲ್ ಮಾಡಿದೆ. ಅಷ್ಟೇ ಅಲ್ಲ, ಯಾವ ಯಾವ ರಾಜ್ಯದಲ್ಲಿ, ಯಾವ ಯಾವ ಭಾಷೆಯಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ ಅನ್ನೋದನ್ನ ಕೂಡ ರಿವೀಲ್ ಮಾಡಿದೆ.
ಸ್ಯಾಕ್ನಿಕ್ ಡಾಟ್ ಕಾಂ ಪ್ರಕಾರ, 'ಯುಐ' ಸಿನಿಮಾ ಮೊದಲ ದಿನ 6.75 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಇದು ಫಸ್ಟ್ ರಿಪೋರ್ಟ್ ಆಗಿದ್ದರಿಂದ ಮಧ್ಯಾಹ್ನದ ವೇಳೆಗೆ 7 ರಿಂದ 7.5 ಕೋಟಿ ರೂ. ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ. ಇನ್ನು ಈವರೆಗೆ ಉಪ್ಪಿ ನಿರ್ದೇಶನದ ಸಿನಿಮಾಗಳು ಕನ್ನಡ ಭಾಷೆಯಲ್ಲಷ್ಟೇ ರಿಲೀಸ್ ಆಗ್ತಿದ್ವು. ಆದರೆ 'ಯುಐ' ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಿದ್ದು, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಯುಐ ಸಿನಿಮಾಗೆ ಸಾಧಾರಾಣ ರೆಸ್ಪಾನ್ಸ್ ಸಿಕ್ಕಿದೆ. ತೆಲುಗಿನಲ್ಲಿ 70ಲಕ್ಷ ರೂಪಾಯಿ, ತಮಿಳಿನಲ್ಲಿ 4 ಲಕ್ಷ ರೂ, ಹಾಗೂ ಹಿಂದಿಯಲ್ಲಿ 1 ಲಕ್ಷ ರೂ ಗಳಿಕೆ ಮಾಡಿದೆ ಎಂದು sacnilk.com ರಿಪೋರ್ಟ್‌ನಲ್ಲಿ ಹೇಳಿದೆ. ಯಾರು ಏನೇ ಅಂದರೂ ಉಪೇಂದ್ರ ನಿರ್ದೇಶನದ ಸಿನಿಮಾ ಒಂದು ರೇಂಜ್‌ಗೆ ಸದ್ದು ಮಾಡುತ್ತೆ ಅನ್ನೋ ನಿರೀಕ್ಷೆಯಂತೂ ಇದೆ. ಅದರಲ್ಲೂ ವೀಕೆಂಡ್‌ನಲ್ಲಿ ಈ ಸಿನಿಮಾ ಮತ್ತಷ್ಟು ಒಳ್ಳೆಯ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.