ಕೇಂದ್ರ Budget 2026 ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬಜೆಟ್ನಿಂದ ಕರ್ನಾಟಕಕ್ಕೆ ಯಾವುದೇ ಲಾಭವಾಗಿಲ್ಲ ಎಂದು ಹೇಳಿದ್ದಾರೆ.

ರಾಮನಗರದಲ್ಲಿ Union Budget 2026 ಕುರಿತು ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಕೇಂದ್ರ ಬಜೆಟ್ನಿಂದ ಕರ್ನಾಟಕ ರಾಜ್ಯಕ್ಕೆ ಯಾವುದೇ ಅನುಕೂಲವಾಗಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಜೆಟ್ನಲ್ಲಿ ರಾಜ್ಯಕ್ಕೆ ದೊಡ್ಡ ಮಟ್ಟದ ಪಾಲು ದೊರಕಿಲ್ಲ ಎಂದು ಆರೋಪಿಸಿದರು.
ಬಜೆಟ್ನಲ್ಲಿ ರಾಜ್ಯಕ್ಕೆ ಅನ್ಯಾಯ
ಕನಕಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, “ನಾನು ಇಷ್ಟೊತ್ತು ಬಜೆಟ್ ಗಮನಿಸಿದೆ. ಯಾವುದೋ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಟ್ಟಿದ್ದಾರೆ ಅಷ್ಟೇ.
ಆದರೆ ರಾಜ್ಯಕ್ಕೆ ಸಿಗಬೇಕಾದ ಹಕ್ಕು ಸಿಗಲಿಲ್ಲ” ಎಂದು ಹೇಳಿದರು. ಹಿಂದಿನಿಂದ ಇದ್ದ ಯೋಜನೆಗಳನ್ನೇ ಮುಂದುವರಿಸಬೇಕೆಂದು ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಮನರೇಗಾ ಬದಲಾವಣೆಗೆ ವಿರೋಧ
ಮನರೇಗಾ ಯೋಜನೆ ಕುರಿತು ಮಾತನಾಡಿದ ಅವರು, 60:40 ಪಾಲುದಾರಿಕೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಹಿಂದಿನಂತೆ ಯೋಜನೆ ಮುಂದುವರಿಯಬೇಕು ಎಂದು ಒತ್ತಾಯಿಸಿದ ಡಿಕೆ ಶಿವಕುಮಾರ್, “ಯಾವುದೇ ಸರ್ಕಾರಕ್ಕೆ ಇಂತಹ ಶರತ್ತಿನಲ್ಲಿ ಬಂಡವಾಳ ಹಾಕಲು ಆಗಲ್ಲ” ಎಂದು ಹೇಳಿದರು.
ಕೃಷಿ ವಲಯದಲ್ಲಿ ಎಐ (AI) ಬಳಕೆಗೆ ಒತ್ತು ನೀಡಿರುವುದರ ಕುರಿತು ಮಾತನಾಡಿದ ಡಿಕೆಶಿ, ಎಐ ಬಳಕೆಯಿಂದ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.
ಕೃಷಿ ಕಾಲದಲ್ಲಿ ಕೂಲಿ ಸಿಗದ ಸ್ಥಿತಿ ಇದ್ದು, ರೈತರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಿದೆ ಎಂದು ಹೇಳಿದರು. ರೇಷ್ಮೆ ಬೆಳೆ ಹಾಗೂ ಕಬ್ಬು ಬೆಳೆಗಾರರಿಗೆ ಉತ್ತೇಜನ ನೀಡಬೇಕೆಂದು ಆಗ್ರಹಿಸಿದರು.
ಸಕ್ಕರೆ ಬೆಲೆ ಏರಿಕೆ ಮಾಡದಿರುವುದರಿಂದ ರೈತರಿಗೆ ಭಾರೀ ನಷ್ಟವಾಗುತ್ತಿದೆ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದರು. ಕಳೆದ 8–9 ವರ್ಷಗಳಿಂದ ಸಕ್ಕರೆ ಬೆಲೆ ಏರಿಕೆ ಮಾಡಿಲ್ಲ ಎಂದು ಆರೋಪಿಸಿದ ಅವರು, “ಬೆಲೆ ಹೆಚ್ಚಿಸದಿದ್ದರೆ ಸಹಕಾರ ಸಂಘಗಳು ಮುಚ್ಚುವ ಹಂತಕ್ಕೆ ಬರುತ್ತವೆ.
ನಮ್ಮ ಭಾಗದ ಐದು ಜಿಲ್ಲೆಗಳಲ್ಲಿ ಕಬ್ಬು ಬೆಳೆಯುತ್ತಾರೆ. ರೈತರಿಗೆ ಕೇಂದ್ರ ಸರ್ಕಾರ ಏನು ಸಹಾಯ ಮಾಡಿದೆ?” ಎಂದು ಪ್ರಶ್ನಿಸಿದರು.

ಹೈ ಸ್ಪೀಡ್ ರೈಲು ಬಗ್ಗೆ ಕಟು ಟೀಕೆ
ಬೆಂಗಳೂರು ಹೈ ಸ್ಪೀಡ್ ರೈಲು ಘೋಷಣೆ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, “ಯಾವ ಹೈ ಸ್ಪೀಡ್ ರೈಲು? ಯಾವ ಸ್ಪೀಡ್ ರೈಲೂ ಬರಲ್ಲ” ಎಂದು ವ್ಯಂಗ್ಯವಾಡಿದರು. 50:50 ಪಾಲುದಾರಿಕೆ ಸಾಧ್ಯವಿಲ್ಲ ಎಂದು ಹೇಳಿದ ಅವರು, ಕೇಂದ್ರ ಸರ್ಕಾರ 90:10 ಅನುಪಾತದಲ್ಲಿ ಹಣ ನೀಡಿದರೆ ರಾಜ್ಯವು 10% ನೀಡಲು ಸಿದ್ಧವಿದೆ ಎಂದು ಹೇಳಿದರು.
ಇತರ ರಾಜ್ಯಗಳಿಗೆ ಹೆಚ್ಚಿನ ಪಾಲು ನೀಡಿರುವ ಕೇಂದ್ರ ಸರ್ಕಾರ, ಕರ್ನಾಟಕಕ್ಕೂ ಅದೇ ರೀತಿಯ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು

ಬೆಂಗಳೂರು ಬಗ್ಗೆ ಭಾರೀ ನಿರೀಕ್ಷೆ ಇತ್ತು ಎಂದು ಹೇಳಿದ ಡಿಕೆ ಶಿವಕುಮಾರ್, “ಮೋದಿಯವರೇ ಬೆಂಗಳೂರನ್ನು ಗ್ಲೋಬಲ್ ಸಿಟಿ ಎಂದಿದ್ದರು. ಆದರೆ ಆ ಗ್ಲೋಬಲ್ ಸಿಟಿಗೆ ಈ ಬಜೆಟ್ನಲ್ಲಿ ಏನು ಒತ್ತು ನೀಡಲಾಗಿದೆ?” ಎಂದು ಪ್ರಶ್ನಿಸಿದರು. ಈ ಕುರಿತು ಸಂಪೂರ್ಣ ಮಾಹಿತಿ ಪಡೆದು ಮತ್ತೊಮ್ಮೆ ಮಾತನಾಡುವುದಾಗಿ ಅವರು ತಿಳಿಸಿದರು.




