Menstrual Leave : ರಾಜ್ಯದಲ್ಲಿ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯವನ್ನು ನೀಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಮಹಿಳಾ ನೌಕರರಿಗೆ ರಾಜ್ಯ ಸರ್ಕಾರ Good News ನೀಡಿದೆ. ರಾಜ್ಯದ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕವಾಗಿ ಒಂದು ದಿನದ ವೇತನ ಸಹಿತ ರಜೆಯನ್ನು ನೀಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಋತುಚಕ್ರ ರಜೆ ನೀತಿ 2025 (Menstrual Leave Policy, 2025) ಅಕ್ಟೋಬರ್ 9 ರಂದು ಸಚಿವ ಸಂಪುಟ ಅನುಮೋದನೆ ನೀಡಿದ್ದು, ಬುಧವಾರ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ. ಈ ನೀತಿಯಡಿ ಮಹಿಳಾ ನೌಕರರಿಗೆ ವಾರ್ಷಿಕ 12 ದಿನಗಳ ವೇತನ ಸಹಿತ ರಜೆ ಸೌಲಭ್ಯ ನೀಡಲಾಗುತ್ತಿದೆ.
ಯಾರು ಪಡೆಯಬಹುದು ಈ ರಜೆ?
ರಾಜ್ಯದಲ್ಲಿ ಕೆಳಗಿನ ಕಾಯ್ದೆಗಳಡಿಯಲ್ಲಿ ನೋಂದಣಿಯಾಗಿರುವ ಎಲ್ಲಾ ಕೈಗಾರಿಕೆಗಳು ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡುವ 18 ರಿಂದ 52 ವರ್ಷದ ಮಹಿಳಾ ನೌಕರರಿಗೆ ಈ ಸೌಲಭ್ಯ ಅನ್ವಯವಾಗುತ್ತದೆ:
- ಕಾರ್ಖಾನೆಗಳ ಕಾಯ್ದೆ, 1948
- ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1961
- ತೋಟ ಕಾರ್ಮಿಕರ ಕಾಯ್ದೆ, 1951
- ಬೀಡಿ ಮತ್ತು ಸಿಗಾರ್ ಕಾರ್ಮಿಕರ ಕಾಯ್ದೆ, 1966
- ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ, 1961
ಇದನ್ನು ಓದಿ : C.N ಅಶ್ವಥ್ನಾರಾಯಣ್ ಅವರ ಅತ್ಯಾಪ್ತ Venkatesh ಆತ್ಮಹತ್ಯೆ
ಈ ರಜೆ ಖಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೂ ಅನ್ವಯವಾಗಲಿದೆ.
ಷರತ್ತುಗಳು
- ಮಹಿಳಾ ನೌಕರರು ತಮ್ಮ ಆಯಾ ತಿಂಗಳ ಋತುಚಕ್ರ ರಜೆಯನ್ನು ಆ ತಿಂಗಳಲ್ಲಿಯೇ ಬಳಸಿಕೊಳ್ಳಬೇಕು.
- ಹಿಂದಿನ ತಿಂಗಳ ರಜೆಯನ್ನು ಮುಂದಿನ ತಿಂಗಳಿಗೆ ವಿಸ್ತರಿಸಲು ಅವಕಾಶವಿಲ್ಲ.
- ಋತುಚಕ್ರ ರಜೆ ಪಡೆಯಲು ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿಲ್ಲ.
- ಉದ್ಯೋಗದಾತರು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳಾ ನೌಕರರಿಗೆ ಈ ವೇತನ ಸಹಿತ ರಜೆಯನ್ನು ಕಡ್ಡಾಯವಾಗಿ ನೀಡಬೇಕು.
ಯಾವ ವಲಯಗಳಿಗೆ ಅನ್ವಯ?
ಈ ಹೊಸ ನೀತಿ ಸರ್ಕಾರದ ಕಚೇರಿಗಳು, ಗಾರ್ಮೆಂಟ್ಸ್, MNC ಗಳು, IT ಕಂಪನಿಗಳು, ಹಾಗೂ ಇತರ ಖಾಸಗಿ ಕೈಗಾರಿಕೆಗಳಿಗೆ ಅನ್ವಯವಾಗಲಿದೆ.
ಕಾರ್ಮಿಕ ಇಲಾಖೆ ಈ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ, ಮಹಿಳಾ ನೌಕರರು ಸಂತಸ ವ್ಯಕ್ತಪಡಿಸಿದ್ದಾರೆ. ಅವರ ಆರೋಗ್ಯ, ಕಾರ್ಯದಕ್ಷತೆ ಮತ್ತು ಮನೋಸ್ಥೈರ್ಯ ಹೆಚ್ಚಿಸಲು ಈ ನೀತಿ ನೆರವಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಇದನ್ನು ನೋಡಿ : MLA Raju Kage: ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹ; ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರಿಗೆ ಶಾಸಕ ರಾಜು ಕಾಗೆ ಪತ್ರ




