Fraud Case : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಹೆಸರಿನಲ್ಲಿ ನಕಲಿ ವೆಬ್ಸೈಟ್ ನಿರ್ಮಿಸಿ ಭಕ್ತರಿಂದ ಹಣ ವಂಚನೆ ನಡೆಸಿದ ಸೈಬರ್ ಕಳ್ಳರ ಕೃತ್ಯ ಇದೀಗ ಬೆಳಕಿಗೆ ಬಂದಿದೆ.

ರಾಜ್ಯದ ಪ್ರಸಿದ್ಧ ಹಾಗೂ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ((Kollur Mookambika Temple) ಹೆಸರಿನಲ್ಲಿ ನಕಲಿ ವೆಬ್ಸೈಟ್ ನಿರ್ಮಿಸಿ, ಭಕ್ತರಿಂದ ಹಣ ವಂಚನೆ ನಡೆಸಿದ ಸೈಬರ್ ಕಳ್ಳರ ಕೃತ್ಯ ಇದೀಗ ಬೆಳಕಿಗೆ ಬಂದಿದೆ.
‘ಕರ್ನಾಟಕ ಟೆಂಪಲ್ ಅಕಮಡೇಶನ್’ ಹೆಸರಿನಲ್ಲಿ ನಕಲಿ ಸೈಟ್
ಭಕ್ತರು ಕೊಠಡಿ ಕಾಯ್ದಿರಿಸಲು ಬಳಸುವ ಅಧಿಕೃತ ವೆಬ್ಸೈಟ್ನಂತೆ ತೋರುವ ನಕಲಿ ವೆಬ್ಸೈಟ್ ತೆರೆಯಲಾಗಿತ್ತು. ‘Karnataka Temple Accommodation’ ಎಂಬ ಹೆಸರಿನಲ್ಲಿ ಈ ಸೈಟ್ ಕಾರ್ಯನಿರ್ವಹಿಸುತ್ತಿತ್ತು.
ಈ ನಕಲಿ ಸೈಟ್ನಲ್ಲಿ QR ಕೋಡ್ ಮತ್ತು PhonePe ಪಾವತಿ ಆಯ್ಕೆಗಳು ನೀಡಲಾಗಿದ್ದು, ಮುಂಗಡ ಬುಕಿಂಗ್ ಹೆಸರಿನಲ್ಲಿ ಹಣ ವಂಚನೆ ಮಾಡಲಾಗುತ್ತಿತ್ತು.
QR ಕೋಡ್ ಮೂಲಕ ವಂಚನೆ
ಸೈಬರ್ ಕಳ್ಳರು WhatsApp ಮೂಲಕ ಭಕ್ತರಿಗೆ ನಕಲಿ QR ಕೋಡ್ ಕಳುಹಿಸಿ, ಯುಪಿಐ (UPI) ಪಾವತಿಗೆ ಸೂಚಿಸುತ್ತಿದ್ದರು. ಪಾವತಿ ಮಾಡಿದ ಬಳಿಕ, ನಕಲಿ ರಶೀದಿ ಕಳುಹಿಸಲಾಗುತ್ತಿತ್ತು.
ಭಕ್ತರು ಕೊಲ್ಲೂರಿಗೆ ಬಂದಾಗ, ಅವರ ಹೆಸರಿನಲ್ಲಿ ಯಾವುದೇ ಅಧಿಕೃತ ನೋಂದಣಿ ದಾಖಲೆ ಇಲ್ಲದೆ ಇರುವುದರಿಂದ ಅವರು ಸಂಕಷ್ಟಕ್ಕೀಡಾಗುತ್ತಿದ್ದರು. ಈ ಸಂದರ್ಭದಲ್ಲೇ ವಂಚನೆ ಬಯಲಿಗೆ ಬಂದಿದೆ.
ಇದನ್ನು ಓದಿ : 5 ವರ್ಷದ ಮಗಳನ್ನು ಕೊಂದು ತಂದೆ ಆತ್ಮಹತ್ಯೆ

ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಈ ಘಟನೆ ದೇವಾಲಯದ ಆಡಳಿತಾಧಿಕಾರಿಗಳ ಗಮನಕ್ಕೆ ಬಂದ ತಕ್ಷಣ, ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೇವಾಲಯದ ಪಕ್ಕದಲ್ಲಿರುವ ಲಲಿತಾಂಬಿಕಾ ಅತಿಥಿ ಗೃಹದ ಕೊಠಡಿಗಳನ್ನು ಬುಕ್ ಮಾಡುವ ಹೆಸರಿನಲ್ಲಿ ಈ ನಕಲಿ ವೆಬ್ಸೈಟ್ ದಂಧೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ದೇವಾಲಯದ ಆಡಳಿತದಿಂದ ಎಚ್ಚರಿಕೆ
ದೇವಾಲಯದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, “ರಾಜ್ಯದ ಎ-ಗ್ರೇಡ್ ದೇವಾಲಯಗಳಿಗೆ ಸರ್ಕಾರದಿಂದ ಅಧಿಕೃತ ವೆಬ್ಸೈಟ್ ಇದೆ. ಅದೇ ‘Karnataka Temples Accommodation’. ಈ ಸೈಟ್ನಲ್ಲಿ ಯಾವುದೇ QR ಕೋಡ್ ಪಾವತಿ ವ್ಯವಸ್ಥೆ ಇಲ್ಲ. ಭಕ್ತರು ನಕಲಿ ಲಿಂಕ್ಗಳಿಗೆ ಹೋಗದೆ, ಸರ್ಕಾರಿ ಸೈಟ್ನಿಂದ ಮಾತ್ರ ಬುಕಿಂಗ್ ಮಾಡಬೇಕು” ಎಂದು ತಿಳಿಸಿದ್ದಾರೆ.
ಹಿಂದೆಯೂ ನಡೆದಿತ್ತು ಇದೇ ರೀತಿಯ ವಂಚನೆ
2024ರ ಫೆಬ್ರವರಿ ತಿಂಗಳಲ್ಲಿಯೂ ಇದೇ ರೀತಿಯ ನಕಲಿ ಲಿಂಕ್ ಮೂಲಕ ಭಕ್ತರು ಮೋಸಹೋಗಿದ್ದ ಘಟನೆ ವರದಿಯಾಗಿತ್ತು. ಆಗ ‘Kollur Devotees Trust’ ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಲಿಂಕ್ ಹರಡಲಾಗಿತ್ತು.
ಈಗ ಮತ್ತೆ ಅದೇ ರೀತಿಯ ವಂಚನೆ ಪುನರಾವರ್ತನೆಯಾಗಿದ್ದು, ಸರ್ಕಾರ ಹಾಗೂ ಪೊಲೀಸರು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ದೇವಾಲಯದ ಆಡಳಿತ ಮಂಡಳಿ ಮತ್ತು ಭಕ್ತರು ಆಗ್ರಹಿಸಿದ್ದಾರೆ.

ಇದನ್ನು ನೋಡಿ : ಭಕ್ತರೇ ಎಚ್ಚರ: ಕೊಲ್ಲೂರು ಮೂಕಾಂಬಿಕಾ ದೇಗುಲದ ಹೆಸರಿನಲ್ಲಿ ನಕಲಿ ವೆಬ್ಸೈಟ್ ತೆರೆದು ವಂಚಿಸ್ತಿದ್ದಾರೆ ಸೈಬರ್ ವಂಚಕರು




