Rishab Shetty: ಕರ್ನಾಟಕದ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಜನಜೀವನವನ್ನು ದೇಶದಾದ್ಯಂತ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಪರಿಚಯಿಸಿದ ಕಲಾವಿದ – ರಿಷಬ್ ಶೆಟ್ಟಿ.

Rishab Shetty: ಕರ್ನಾಟಕದ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಿದ ರಿಷಬ್ ಶೆಟ್ಟಿ
ಕರ್ನಾಟಕದ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಜನಜೀವನವನ್ನು ದೇಶದಾದ್ಯಂತ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಪರಿಚಯಿಸಿದ ಕಲಾವಿದ – ರಿಷಬ್ ಶೆಟ್ಟಿ.
ತುಳುನಾಡಿನ ಭೂತಕೋಲ, ಕಂಬಳ, ಇತಿಹಾಸ ಮತ್ತು ಪ್ರಕೃತಿ ಸೌಂದರ್ಯವನ್ನು ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೋರಿಸಿದ ರಿಷಬ್, ಭಾರತೀಯ ಚಿತ್ರರಂಗಕ್ಕೆ ಹೊಸ ಉಸಿರು, ಹೊಸ ಶೈಲಿ ನೀಡಿದರು.
ಇಂದು ಅವರು ಕೇವಲ ನಟ ಅಥವಾ ನಿರ್ದೇಶಕರಲ್ಲ, ಕನ್ನಡ ಚಿತ್ರರಂಗದ ಗೌರವದ ಸಂಕೇತ.
ಕ್ಲ್ಯಾಪ್ ಬಾಯ್ನಿಂದ ಡಿವೈನ್ ಸ್ಟಾರ್ವರೆಗೆ – ಹೋರಾಟದ ಪಥ
1983ರಲ್ಲಿ ಕುಂದಾಪುರದ ಕೆರಾಡಿಯಲ್ಲಿ ಜನಿಸಿದ ಪ್ರಶಾಂತ್ ಶೆಟ್ಟಿ, ಸಿನಿಮಾದತ್ತ ಇರುವ ಆಸೆಯಿಂದ “ರಿಷಬ್ ಶೆಟ್ಟಿ” ಎಂಬ ಹೆಸರಿನಲ್ಲಿ ತಮ್ಮ ಹಾದಿ ಪ್ರಾರಂಭಿಸಿದರು.
ಬೆಂಗಳೂರಿಗೆ ಬಂದು ವಾಟರ್ ಕ್ಯಾನ್ ವ್ಯವಹಾರ, ನಂತರ ಹೋಟೆಲ್ ಉದ್ಯಮ – ಎಲ್ಲೆಡೆ ವಿಫಲತೆ ಕಂಡರೂ, ಸಿನಿಮಾ ಕನಸನ್ನು ಬಿಡಲಿಲ್ಲ.
2005–06ರಲ್ಲಿ ಅವರು ‘ಸೈನೆಡ್’ ಸಿನಿಮಾದ ನಿರ್ದೇಶಕರ ಸಹಾಯಕನಾಗಿದ್ದರು. ಬಳಿಕ ರವಿ ಶ್ರೀವತ್ಸ ನಿರ್ದೇಶನದ ‘ಗಂಡ ಹೆಂಡತಿ’ ಸಿನಿಮಾಗೆ ಕ್ಲ್ಯಾಪ್ ಬಾಯ್ ಆಗಿ ಕೆಲಸ ಮಾಡಿದರು.
ಒಮ್ಮೆ ಕ್ಲ್ಯಾಪ್ ತಪ್ಪಿದ್ದಕ್ಕೆ ಕೆನ್ನೆಗೆ ಬಿದ್ದ ಏಟು, ಮನಸ್ಸಿಗೆ ಹೊಡೆತ. ಆದರೆ ಅದೇ ಘಟನೆ ರಿಷಬ್ ಜೀವನವನ್ನು ಬದಲಿಸಿತು.

ನಿರ್ದೇಶಕನಾಗಿ ಬೆಳಗಿದ ಕ್ಷಣ
2016ರಲ್ಲಿ ‘ರಿಕ್ಕಿ’ ಮೂಲಕ ನಿರ್ದೇಶಕರಾಗಿ ಪ್ರಥಮ ಪ್ರಯತ್ನ. ನಂತರದ ‘ಕಿರಿಕ್ ಪಾರ್ಟಿ’ (ಡಿಸೆಂಬರ್ 2016) ಅವರು ನಿರ್ದೇಶಿಸಿದ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡು,
ರಿಷಬ್ ಶೆಟ್ಟಿಯನ್ನು ಕನ್ನಡ ಯುವ ನಿರ್ದೇಶಕರ ಮುಂಚೂಣಿಗೆ ತಂದು ನಿಲ್ಲಿಸಿತು.
ಆಮೇಲೆ ಬಂದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಸಿನಿಮಾ ರಾಷ್ಟ್ರ ಪ್ರಶಸ್ತಿ ಗೆದ್ದು,
ರಿಷಬ್ ಅವರ ಪ್ರತಿಭೆಗೆ ರಾಷ್ಟ್ರಮಟ್ಟದ ಮಾನ್ಯತೆ ತಂದುಕೊಟ್ಟಿತು.

ನಾಯಕನಾಗಿ ಮೆರೆದ ‘ಬೆಲ್ ಬಾಟಂ’
2019ರ ‘ಬೆಲ್ ಬಾಟಂ’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡ ರಿಷಬ್ ಶೆಟ್ಟಿ,ತಮ್ಮ ವಿಶಿಷ್ಟ ಅಭಿನಯದ ಮೂಲಕ ಕಾಮಿಡಿ–ಥ್ರಿಲ್ಲರ್ ಪ್ರಕಾರದ ಹೊಸ ದಿಕ್ಕು ತೆರೆದರು.ಈ ಚಿತ್ರವು ವಾಣಿಜ್ಯ ಹಾಗೂ ವಿಮರ್ಶಾತ್ಮಕವಾಗಿ ಯಶಸ್ವಿಯಾಯಿತು.
‘ಕಾಂತಾರ’ ಮೂಲಕ ಪ್ಯಾನ್–ಇಂಡಿಯಾ ಗೆಲುವು
2022ರಲ್ಲಿ ತೆರೆಕಂಡ ‘ಕಾಂತಾರ’ ಸಿನಿಮಾ ಕನ್ನಡ ಚಿತ್ರರಂಗದ ಮುಖವನ್ನು ಬದಲಿಸಿತು.ತುಳುನಾಡಿನ ಭೂತಕೋಲ ಸಂಸ್ಕೃತಿಯ ಆಳವಾದ ಚಿತ್ರಣ ಮತ್ತು ದೈವೀಯ ನೈಜತೆ ರಿಷಬ್ ಶೆಟ್ಟಿಯನ್ನು “ಡಿವೈನ್ ಸ್ಟಾರ್” (Divine Star) ಎನಿಸುವ ಮಟ್ಟಕ್ಕೆ ಕೊಂಡೊಯ್ದಿತು

ಈ ಸಿನಿಮಾ ಪ್ಯಾನ್–ಇಂಡಿಯಾ ಮಟ್ಟದಲ್ಲಿ ದಾಖಲೆಬರೆದಿತು — ಕೋಟ್ಯಾಂತರ ರೂಪಾಯಿ ಗಳಿಕೆ, ವಿಮರ್ಶಕರ ಪ್ರಶಂಸೆ, ಮತ್ತು ಅತ್ಯುತ್ತಮ ನಟರ ರಾಷ್ಟ್ರೀಯ ಪ್ರಶಸ್ತಿ ಎಂಬ ಸಮ್ಮಾನ ರಿಷಬ್ ಮುಡಿಗೇರಿತು.

🔹 IMDb ಜನಪ್ರಿಯತೆಯ ಪಟ್ಟಿಯಲ್ಲಿ ನಂ.1
ಇಂಟರ್ನೆಟ್ ಮೂವಿ ಡೇಟಾಬೇಸ್ (IMDb) ಪ್ರತಿ ವಾರ ಬಿಡುಗಡೆ ಮಾಡುವ ಭಾರತದ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ರಿಷಬ್ ಶೆಟ್ಟಿ ನಂ.1 ಸ್ಥಾನ ಪಡೆದಿದ್ದಾರೆ. ಇದು ಕೇವಲ ಅವರಿಗಲ್ಲ, ಕನ್ನಡ ಚಿತ್ರರಂಗಕ್ಕೂ ಹೆಮ್ಮೆಯ ಕ್ಷಣ.

ಮುಂದಿನ ಅಧ್ಯಾಯ – ‘ಕಾಂತಾರ ಚಾಪ್ಟರ್ 1’
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ: ಚಾಪ್ಟರ್ 1’ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದೆ.
ಈ ಸಿನಿಮಾ ಕೋಟ್ಯಾಂತರ ರೂಪಾಯಿ ಬಾಚಿ, ರಿಷಬ್ ಶೆಟ್ಟಿಯನ್ನು ದೇಶದ ಮೆಗಾಸ್ಟಾರ್ಗಳ ಪಂಕ್ತಿಗೆ ಸೇರಿಸಿದೆ.




