DEVEGOWDA : ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರ ಆರೋಗ್ಯದಲ್ಲಿ ಈಗ ಸುಧಾರಣೆ ಕಂಡುಬಂದಿದೆ.

ಜ್ವರ ಹಾಗೂ ಯೂರಿನ್ ಇನ್ಫೆಕ್ಷನ್ ಸಮಸ್ಯೆಯಿಂದ ಕಳೆದ ವಾರದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರ ಆರೋಗ್ಯದಲ್ಲಿ ಈಗ ಸುಧಾರಣೆ ಕಂಡುಬಂದಿದೆ. ವೈದ್ಯರ ಸಲಹೆಯ ಮೇರೆಗೆ ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಅಕ್ಟೋಬರ್ 6ರಂದು ರಾತ್ರಿ ದೇವೇಗೌಡರನ್ನು ತೀವ್ರ ಜ್ವರ ಹಾಗೂ ಮೂತ್ರನಾಲಿ ಸೋಂಕಿನ ಕಾರಣದಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಅವರನ್ನು ದಾಖಲಿಸಲಾಗಿದ್ದು, ಹಿರಿಯ ವೈದ್ಯ ಡಾ. ಸುದರ್ಶನ್ ಬಲ್ಲಾಳ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಯಿತು.
ವೈದ್ಯರ ಸಮರ್ಪಿತ ಸೇವೆ ಹಾಗೂ ಕುಟುಂಬದ ಪಾಲನೆಯಿಂದ ದೇವೇಗೌಡರ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಅವರು ಸಂಪೂರ್ಣ ಚೇತರಿಸಿಕೊಂಡಿದ್ದು, ಮುಂದಿನ ಕೆಲ ದಿನಗಳ ಕಾಲ ಮನೆ ವಿಶ್ರಾಂತಿಯಲ್ಲಿ ಇರಲಿದ್ದಾರೆ.

ಇದನ್ನು ನೋಡಿ : ಹೆಚ್ಡಿ ದೇವೇಗೌಡ ಆರೋಗ್ಯದಲ್ಲಿ ಸುಧಾರಣೆ, ಆಸ್ಪತ್ರೆಯಿಂದ ಡಿಸ್ಚಾರ್ಜ್
ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ, ದೇವೇಗೌಡರ ಆರೋಗ್ಯ ವಿಚಾರಿಸಿದರು. ಅಕ್ಟೋಬರ್ 10ರಂದು ಮಾತನಾಡಿದ ಕುಮಾರಸ್ವಾಮಿ, “ದೇವೇಗೌಡರು ಚೇತರಿಸಿಕೊಂಡು ಮೂರ್ನಾಲ್ಕು ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ. ಕಾರ್ಯಕರ್ತರು ಆತಂಕಪಡಬೇಕಾದ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದರು.
ಜೆಡಿಎಸ್ ಕಾರ್ಯಕರ್ತರು ಹಾಗೂ ನಾಯಕರು ದೇವೇಗೌಡರ ಚೇತರಿಕೆಗೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಚಿಕ್ಕಬಳ್ಳಾಪುರದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ 101 ತೆಂಗಿನಕಾಯಿ ಈಡುಗಾಯಿ ಒಡೆದು ದೇವೇಗೌಡರ ಆರೋಗ್ಯ ಸುಧಾರಣೆಗೆ ಪ್ರಾರ್ಥನೆ ಸಲ್ಲಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ನಾಯಕರು, ಗಣ್ಯರು ಮತ್ತು ಅಭಿಮಾನಿಗಳು ದೇವೇಗೌಡರಿಗೆ ಶೀಘ್ರ ಗುಣಮುಖತೆಗಾಗಿ ಹಾರೈಕೆ ಸಲ್ಲಿಸಿದ್ದಾರೆ.

ಇದನ್ನು ಓದಿ : ನಿಧಿ ಶೋಧನೆಗಾಗಿ ಭೂತನ ಗುಡಿ ಧ್ವಂಸ




