
CHITRADURGA: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು, ಕಾರು ಸಮೇತ ಚಾಲಕ ಸುಟ್ಟು ಕರಕಲಾದ ಭೀಕರ ದುರಂತ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಅರಳಿಕಟ್ಟೆ ಗ್ರಾಮದ ಬಳಿ ನಡೆದಿದೆ. ಈ ದಾರುಣ ದುರಂತದಲ್ಲಿ ಅರಳಿಕಟ್ಟೆ ಗ್ರಾಮದ ನಿವಾಸಿ ಸಿದ್ದೇಶ್ವರ್ ಮೃತರಾಗಿದ್ದಾರೆ.
ಕಾರಿನಲ್ಲಿ ಊರಿಗೆ ವಾಪಸ್ ಆಗುವ ವೇಳೆ ಆಕಸ್ಮಿಕವಾಗಿ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಕಾರನ್ನು ನಿಲ್ಲಿಸಿ ಕಾರಿನಿಂದ ಹೊರಬರಲು ಮೃತ ಸಿದ್ದೇಶ್ವರ್ ಹರಸಾಹಸವೇ ಪಟ್ಟಿದ್ದಾರೆ. ಕಾರು ಧಗಧಗನೇ ಹೊತ್ತಿ ಉರಿದಿದೆ. ಧಗಧಗ ಒತ್ತಿ ಉರಿಯುತ್ತಿದ್ದ ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದರು. ಆದರೆ ದುರಾದೃಷ್ಟವಶಾತ್ ಬೆಂಕಿ ಅವಘಡದಿಂದ ತಪ್ಪಿಸಿಕೊಳ್ಳಲಾಗದೇ ಕಾರು ಸಮೇತ ಚಾಲಕ ಸಿದ್ದೇಶ್ವರ್ ಸುಟ್ಟು ಕರಕಲಾಗಿದ್ದಾರೆ. ಸ್ಥಳಕ್ಕೆ ಐಮಂಗಲ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




