Fire Tragedy : ಮಡಿಕೇರಿ ತಾಲೂಕಿನ ಕಾಟಗೇರಿಯ ಖಾಸಗಿ ವಸತಿ ಶಾಲೆಯಲ್ಲಿ ಇಂದು ಬೆಳಿಗ್ಗೆ ಭೀಕರ ಅಗ್ನಿ ಅವಘಡ ಸಂಭವಿಸಿದೆ.

ಖಾಸಗಿ ವಸತಿ ಶಾಲೆಯಲ್ಲಿ ಬೆಂಕಿ ಅವಘಡ
ಮಡಿಕೇರಿ ತಾಲೂಕಿನ ಕಾಟಗೇರಿಯ ಖಾಸಗಿ ವಸತಿ ಶಾಲೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ, ಎರಡನೇ ತರಗತಿಯ ವಿದ್ಯಾರ್ಥಿ ಪುಷ್ಪಕ್ (7) ಮೃತಪಟ್ಟಿದ್ದಾನೆ. ಈ ದುರ್ಘಟನೆ ಸ್ಥಳೀಯರು ಹಾಗೂ ಶಾಲಾ ಮಕ್ಕಳಲ್ಲಿ ಆಘಾತವನ್ನುಂಟುಮಾಡಿದೆ. ಮೃತ ಪುಷ್ಪಕ್ ಚೆಟ್ಟಿಮಾನಿ ಗ್ರಾಮದ ನಿವಾಸಿಯಾಗಿದ್ದು, ಶಾಲೆಯ ವಸತಿ ಗೃಹದಲ್ಲಿದ್ದ. ಅವನು ಈ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ವಿದ್ಯಾರ್ಥಿಗಳು ಮಲಗಿದ್ದ ಸಂದರ್ಭದಲ್ಲಿ ಅವಘಡ
ಬೆಳಿಗ್ಗೆ ಶಾಲೆಯ ಕೊಠಡಿಯಲ್ಲಿ ವಿದ್ಯಾರ್ಥಿಗಳು ಮಲಗಿದ್ದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೊಠಡಿ ಯಲ್ಲಿ ಸುಮಾರು 35ಕ್ಕೂ ಹೆಚ್ಚು ಮಕ್ಕಳು ಇದ್ದರು. ಬೆಂಕಿ ಕಾಣುತ್ತಿದ್ದಂತೆ ಬಹುತೇಕ ಮಕ್ಕಳು ಭಯದಿಂದ ಓಡಿಹೋಗಿದ್ದಾರೆ.
ಇದನ್ನು ನೋಡಿ : R.Ashok : Bjp Opposition Leader R.Ashok ಬೆಂಗಾವಲು ವಾಹನದ Driver Suicide

ದಟ್ಟ ಹೊಗೆ – ಕೆಲವರು ಹೊರಗೆ ಬರಲಾರದೆ ಕಿರುಚಾಟ
ಇನ್ನು ಘಟನೆ ಸಂಭವಿಸಿದಾಗ ಭಾರೀ ಹೊಗೆಯಿಂದ ಕೆಲವು ಮಕ್ಕಳು ಹೊರಗೆ ಬರಲಾಗದೆ ಕೊಠಡಿಯಲ್ಲೇ ಸಿಕ್ಕಿಹಾಕಿಕೊಂಡಿದ್ದರು. ವಸತಿ ಗೃಹದ ಸಿಬ್ಬಂದಿ ತಕ್ಷಣ ಹಸ್ತಕ್ಷೇಪಿಸಿ ಕೆಲ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ ಪುಷ್ಪಕ್ ಮಾತ್ರ ದಟ್ಟ ಹೊಗೆಗೆ ಸಿಲುಕಿದ ಕಾರಣ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆಂದು ಶಂಕಿಸಲಾಗಿದೆ. ಸಿಬ್ಬಂದಿ ಮಕ್ಕಳ ಎಣಿಕೆ ಮಾಡುತ್ತಿದ್ದಾಗ ಒಬ್ಬ ವಿದ್ಯಾರ್ಥಿ ಕಾಣೆಯಾಗಿರುವುದು ತಿಳಿದು, ಸತತ ಹುಡುಕಾಟದ ನಂತರ ಪುಷ್ಪಕ್ ದೇಹ ಸಜೀವವಾಗಿ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಎಲ್ಲರ ಮನಕಲಕುವಂತಿದೆ.
ಅಗ್ನಿಶಾಮಕ ದಳ ಸ್ಥಳಕ್ಕೆ ಧಾವನೆ – ಬೆಂಕಿ ನಿಯಂತ್ರಣ
ಇನ್ನು ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಬೆಂಕಿಯನ್ನು ನಂದಿಸಲಾಗಿದೆ. ಬೆಂಕಿಯ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ. ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಚಂದ್ರಶೇಖರ್ ಹಾಗೂ ಅಗ್ನಿಶಾಮಕ ದಳದ ಅಧಿಕಾರಿ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಬಾಲಕನ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಇದನ್ನು ನೋಡಿ : SRINIVASA SAGARA DAM| ವಿಗ್ರಹದ ಮೇಲೆ ಕಾಲಿಟ್ಟು ಹುಚ್ಚಾಟ – ದೇವರಿಗೆ ಇದೆಂಥಾ ಅವಮಾನ | CHIKKABALLAPURA NEWS |
ಈ ದುರ್ಘಟನೆಯು ಶಾಲಾ ವಸತಿ ಭವನಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಶಾಲಾ ನಿರ್ವಹಣಾ ವ್ಯವಸ್ಥೆಯ ತ್ವರಿತ ಪ್ರತಿಕ್ರಿಯೆ, ಮಕ್ಕಳ ರಕ್ಷಣಾ ಕ್ರಮಗಳು ಮತ್ತು ಅಗ್ನಿ ಶಾಮಕ ವ್ಯವಸ್ಥೆಗಳ ಲಭ್ಯತೆ ಕುರಿತು ತನಿಖೆ ಅಗತ್ಯವಾಗಿದೆ.




