
RBI New Deputy Governor: ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ನೂತನ ಉಪಗವರ್ನರ್ (Deputy Governer) ಆಗಿ ಶಿರೀಶ್ ಚಂದ್ರ ಮುರ್ಮು(Shirish Chandra Murmu) ಅವರನ್ನು ನೇಮಕ ಮಾಡಲಾಗಿದೆ. ಅವರು ಮೂರು ವರ್ಷಗಳ ಅವಧಿಗೆ ಈ ಜವಾಬ್ದಾರಿಯನ್ನು ವಹಿಸಲಿದ್ದಾರೆ.
ಸದ್ಯ ಉಪಗವರ್ನರ್ ಆಗಿರುವ ರಾಜೇಶ್ವರ್ ರಾವ್ ಅವರ ಅವಧಿ ಅಕ್ಟೋಬರ್ 8ರಂದು ಅಂತ್ಯವಾಗಲಿದೆ. ಅವರ ಅವಧಿ ಮುಕ್ತಾಯವಾದ ಬಳಿಕ, ಶಿರೀಶ್ ಮುರ್ಮು ಅಕ್ಟೋಬರ್ 9ರಿಂದ ಅಧಿಕೃತವಾಗಿ ಉಪಗವರ್ನರ್ ಹುದ್ದೆಗೇರಲಿದ್ದಾರೆ. ಶಿರೀಶ್ ಚಂದ್ರ ಮುರ್ಮು ಅವರು ಈಗಾಗಲೇ ಆರ್ಬಿಐನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು, ಸಂಸ್ಥೆಯ ಆಂತರಿಕ ನಿರ್ವಹಣಾ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಆರ್ಬಿಐನಲ್ಲಿ(RBI) ಒಟ್ಟು ನಾಲ್ವರು ಉಪಗವರ್ನರ್ಗಳು ಇದ್ದು, ಇವರು ಹಣಕಾಸು ನೀತಿ ರೂಪಿಕೆ, ಬ್ಯಾಂಕಿಂಗ್ ಮೇಲ್ವಿಚಾರಣೆ, ಹಣಕಾಸು ಮಾರುಕಟ್ಟೆ ನಿಯಂತ್ರಣ ಹಾಗೂ ಬೇರೆ ಪ್ರಮುಖ ಖಾತೆಗಳ ಉಸ್ತುವಾರಿಗಳನ್ನು ವಹಿಸಿಕೊಂಡಿರುತ್ತಾರೆ. ಶಿರೀಶ್ ಮುರ್ಮು ಅವರು ಈ ಪೈಕಿ ಯಾವ ಖಾತೆಗಳನ್ನು ಹೊಣೆ ಹೊತ್ತಿರುತ್ತಾರೆ ಎಂಬುದನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ.
ಈ ನೇಮಕಾತಿಗೆ ಕೇಂದ್ರ ಸರ್ಕಾರದ ಸಂಪುಟ ನೇಮಕಾತಿ ಸಮಿತಿ (ACC) ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಅವರು ತಮ್ಮ ಕರ್ತವ್ಯ ವಹಿಸಲಿದ್ದಾರೆ.




