ಸಕಲೇಶಪುರದಲ್ಲಿ Pre wedding ಶೂಟ್ಗೆ ಹೋಗುವಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವರ ಸಾವನ್ನಪ್ಪಿದ ದುರ್ಘಟನೆ. ಘಟನೆಯ ಸಂಪೂರ್ಣ ವಿವರ ಇಲ್ಲಿ ಓದಿ.

Pre wedding ಶೂಟ್ಗೆ ತೆರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮದುವೆಗೆ ಕೆಲವೇ ದಿನಗಳು ಬಾಕಿ ಇರುವಾಗ ವರನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದ ಬಳಿ ನಡೆದಿದೆ. ಮೃತ ಯುವಕನನ್ನು ಮನು ಎಲ್.ಎನ್. (29) ಎಂದು ಗುರುತಿಸಲಾಗಿದ್ದು, ಇವರು ಬೇಲೂರು ತಾಲೂಕಿನ ಲಕ್ಕುಂದ ಗ್ರಾಮದ ನಿವಾಸಿಯಾಗಿದ್ದರು. ಮೇ 10ರಂದು ಆಲೂರು ತಾಲೂಕಿನ ತೊಗರನಹಳ್ಳಿ ಗ್ರಾಮದ ಕಾಂಚನ ಅವರೊಂದಿಗೆ ಇವರ ಮದುವೆ ನಿಗದಿಯಾಗಿದ್ದು, ಕುಟುಂಬದಲ್ಲಿ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿದ್ದವು.

ಇಂದು ಬೆಳಿಗ್ಗೆ ಮನು ಅವರು ಪ್ರೀವೆಡ್ಡಿಂಗ್ ಶೂಟ್ಗಾಗಿ ವಧುವನ್ನು ಕರೆತರಲು ತಮ್ಮ ಕಾರಿನಲ್ಲಿ ಒಬ್ಬರೇ ತೆರಳುತ್ತಿದ್ದಾಗ, ಮೂಗಲಿ ಗ್ರಾಮದ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮನು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆ ಮದುವೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಭಾರೀ ಆಘಾತ ತಂದಿದ್ದು, ಮಗನ ಸಾವಿನ ಸುದ್ದಿ ಕೇಳಿ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸಂತೋಷದಿಂದ ಕಂಗೊಳಿಸುತ್ತಿದ್ದ ಮನೆ ಈಗ ದುಃಖದ ಮೌನದಲ್ಲಿ ಮುಳುಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.




