Raichur ನಗರದಲ್ಲಿ 11 ತಿಂಗಳ ಮಗುವಿಗೆ ಹಾಲುಣಿಸಿದ ಕೆಲವೇ ಕ್ಷಣದಲ್ಲಿ ಮಹಿಳಾ ಉದ್ಯೋಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

Raichur ನಗರದ ಐಬಿ ಕಾಲೋನಿಯಲ್ಲಿ ಮಹಿಳಾ ಉದ್ಯೋಗಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಪ್ರಕರಣದಲ್ಲಿ ಮಹಿಳೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಗಂಡ ಮತ್ತು ಅತ್ತೆಯ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
ಸದ್ಯ ರಾಯಚೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ…

ಮೃತ ಮಹಿಳೆ ವಿದ್ಯಾ: 11 ತಿಂಗಳ ಮಗುವಿನ ತಾಯಿ
ಮೃತ ಮಹಿಳೆಯನ್ನು ವಿದ್ಯಾ (30) ಎಂದು ಗುರುತಿಸಲಾಗಿದೆ. ಅವರು ನಗರದ ಉಪ ವಿಜ್ಞಾನ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದರು.
ಕೇವಲ ಎರಡು ವರ್ಷಗಳ ಹಿಂದಷ್ಟೇ ವಿದ್ಯಾ ಮತ್ತು ಮಂಜುನಾಥ್ ವಿವಾಹವಾಗಿದ್ದು, ದಂಪತಿಗೆ 11 ತಿಂಗಳ ಮಗು ಕೂಡ ಇದೆ. ಈ ಘಟನೆ ಕುಟುಂಬ ಹಾಗೂ ಸ್ಥಳೀಯರಲ್ಲಿ ಆಘಾತ ಉಂಟುಮಾಡಿದೆ.
ಮದುವೆಯಾದಾಗಿನಿಂದ ವರದಕ್ಷಿಣೆಗಾಗಿ ಗಂಡ ಮತ್ತು ಅತ್ತೆ ಪೀಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ವಿದ್ಯಾ ಕುಟುಂಬವು ವರದಕ್ಷಿಣೆಯಾಗಿ 30 ಗ್ರಾಂ ಚಿನ್ನಾಭರಣ , ಅರ್ಧ ಕೆಜಿ ಬೆಳ್ಳಿ ಆಭರಣ ನೀಡಿದ್ದರೂ ಮುಂದುವರಿದಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ.

ಗಂಡನ ಕುಡಿತದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದೇ ಕೊನೆಯ ಘಟನೆ
ಘಟನೆ ನಡೆದ ದಿನ ಪತಿ ಮಂಜುನಾಥ್ ಮದ್ಯಪಾನ ಮಾಡಿ ಮನೆಗೆ ಬಂದಿದ್ದಾನೆ ಎಂದು ತಿಳಿದುಬಂದಿದೆ. ನಂತರ ವಿದ್ಯಾ ಕೆಲಸದಿಂದ ಮನೆಗೆ ಬಂದು 11 ತಿಂಗಳ ಹಸುಗೂಸಿಗೆ ಹಾಲುಣಿಸಿದ್ದಾರೆ.
ಅದೇ ವೇಳೆ ಗಂಡನ ಕುಡಿತದ ಬಗ್ಗೆ ಅತ್ತೆಗೆ ಬೇಸರ ವ್ಯಕ್ತಪಡಿಸಿದ್ದಾರಂತೆ. ಆದರೆ ಕೆಲವೇ ಹೊತ್ತಿನಲ್ಲಿ ವಿದ್ಯಾ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಗಂಡ ಮಂಜುನಾಥ್ ಮತ್ತು ಅತ್ತೆ ಕವಿತಾ ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ದೂರು ದಾಖಲಿಸಲಾಗಿದೆ.

ಪೊಲೀಸ್ ತನಿಖೆ ಮುಂದುವರಿಕೆ: ಡಿವೈಎಸ್ಪಿ ನೇತೃತ್ವದಲ್ಲಿ ಪರಿಶೀಲನೆ
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಡಿವೈಎಸ್ಪಿ ಶಾಂತವೀರ್ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಸಾವಿನ ನಿಖರ ಕಾರಣ ಪತ್ತೆ ಮಾಡಲು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ವರದಕ್ಷಿಣೆ ಪೀಡನೆ ಮತ್ತು ಕೊಲೆ ಆರೋಪಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.




