
BELLARY 4 YEARS BOY DEATH : ಮನೆಯ ಮುಂದೆ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕ ಚರಂಡಿ ನೀರಿನಿಂದ ತುಂಬಿದ್ದ ಗುಂಡಿಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕುರೇಕುಪ್ಪ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಕುರೇಕುಪ್ಪದ 6ನೇ ವಾರ್ಡಿನ ಪಿ. ಅರವಿಂದ್ (4) ಎಂದು ಗುರುತಿಸಲಾಗಿದೆ. ನೆನ್ನೆ ಸಂಜೆ ಸಮಯದಲ್ಲಿ ಆಟವಾಡುತ್ತಿದ್ದ ಅರವಿಂದ್ ತಾತನ ಮನೆಗೆ ಹೋಗುತ್ತಿದ್ದಾಗ, ಅಚಾನಕ್ ಕಾಲು ಜಾರಿ ಚರಂಡಿಯ ಗುಂಡಿಗೆ ಬಿದ್ದು ಕೊನೆಯುಸಿರೆಳೆದಿದ್ದಾನೆ.
ಆಟವಾಡಲು ಹೋಗಿದ್ದ ಬಾಲಕ ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಗಾಬರಿಗೊಂಡ ಪೋಷಕರು ಹುಡು ಕಾಡಿದ್ದಾರೆ. ತಡರಾತ್ರಿ ಚರಂಡಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದ್ದು, ಕೂಡಲೇ ಜಿಂದಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ನೀರಿನಲ್ಲೇ ಮಗು ಮೃತಪಟ್ಟಿದ್ದ ಬಗ್ಗೆ ವೈದ್ಯರು ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಘಟನೆ ಸಂಬಂಧ ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗು ಬಿದ್ದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗುವಿನ ಪೋಷಕರು ಹಾಗೂ ಸ್ಥಳೀಯರು ಪುರಸಭೆಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.




