Belagavi ಗ್ರಾಮೀಣ ಕ್ಷೇತ್ರದ ಅಂಗನವಾಡಿ ಮಕ್ಕಳಿಗೆ ಅವಧಿ ಮುಗಿದ ಸಿರಿಧಾನ್ಯ ಲಡ್ಡು ವಿತರಣೆ ಮಾಡಿರುವ ಆರೋಪ ಕೇಳಿಬಂದಿದೆ…

ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರದಲ್ಲೇ ಅಂಗನವಾಡಿ ಮಕ್ಕಳಿಗೆ ಅವಧಿ ಮುಗಿದ ಸಿರಿಧಾನ್ಯ ಲಡ್ಡು ವಿತರಣೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. Belagavi ಗ್ರಾಮೀಣ ಕ್ಷೇತ್ರದ ಹಲವು ಅಂಗನವಾಡಿ ಕೇಂದ್ರಗಳಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ರಾಜ್ಯದ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯಲೆಂಬ ಉದ್ದೇಶದಿಂದ ಮಿಲೆಟ್ ಲಡ್ಡು ವಿತರಣೆ ಮಾಡಲಾಗುತ್ತಿದೆ. ಆದರೆ ಇದೇ ಯೋಜನೆಯಲ್ಲಿ ದೊಡ್ಡ ಅಕ್ರಮ ನಡೆದಿದೆ ಎನ್ನಲಾಗಿದೆ. ಕನ್ನಡ ಹೋರಾಟಗಾರ್ತಿ ಕಸ್ತೂರಿಭಾವಿ ಮೂರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ ಆರು ತಿಂಗಳ ಹಿಂದೆಯೇ ಎಕ್ಸ್ಪೈರ್ಡ್ ಆಗಿರುವ ಪದಾರ್ಥಗಳು ವಿತರಣೆ ಮಾಡಲಾಗುತ್ತಿರುವುದು ಪತ್ತೆಯಾಗಿದೆ.
ಇದನ್ನು ಓದಿ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲು

ವೈರಲ್ ವಿಡಿಯೋದಲ್ಲಿ ಬೆಚ್ಚಿಬೀಳಿಸುವ ದೃಶ್ಯಗಳು
ಭೇಟಿಯ ವೇಳೆ ತೆಗೆದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ. ವಿಡಿಯೋದಲ್ಲಿ ಹುಳ ಬಿದ್ದ ರವಾ, ಅವಧಿ ಮುಗಿದ ಸಜ್ಜೆ ಲಡ್ಡು ಹಾಗೂ ಸಾಂಬಾರ್ ಪುಡಿ ಕಂಡುಬಂದಿದೆ. 2025ರ ಅಕ್ಟೋಬರ್ನಲ್ಲಿ ಅವಧಿ ಮುಗಿದ ಮಿಲೆಟ್ ಲಡ್ಡುಗಳನ್ನು ಇದೀಗ ಮಕ್ಕಳಿಗೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ವಿಚಾರ ಬೆಳಕಿಗೆ ಬಂದ ಬಳಿಕ ಪೋಷಕರು ಮತ್ತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಗನವಾಡಿ ಸಹಾಯಕಿಯರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮಕ್ಕಳ ಆರೋಗ್ಯದ ಬಗ್ಗೆ ಆತಂಕ ಹೆಚ್ಚಳ
ಅವಧಿ ಮುಗಿದ ಆಹಾರ ಸೇವನೆಯಿಂದ ಅಜೀರ್ಣ, ವಾಂತಿ, ಭೇದಿ ಹಾಗೂ ಜ್ವರದಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸಚಿವರ ಕ್ಷೇತ್ರದಲ್ಲೇ ಇಂತಹ ಘಟನೆ ನಡೆದಿರುವುದು ಆಡಳಿತದ ಮೇಲಿನ ಪ್ರಶ್ನೆಗಳನ್ನು ಹೆಚ್ಚಿಸಿದೆ.
ಇದನ್ನು ನೋಡಿ : GUBBI|ಕ್ಯಾನ್ಸರ್ ಪೀಡಿತ ಬಾಲಕಿಯ ನೆರವಿಗೆ ನಿಂತ ಪ್ರಜಾಶಕ್ತಿ ಟಿವಿ- ಅಧಿಕಾರಿಗಳನ್ನೇ ತಿರುಗಿನೋಡುವಂತೆ ಮಾಡಿತು




