
VIJAYAPURA NEWS | ಭಾರೀ ಮಳೆಯಿಂದಾಗಿ ಡೋಣಿ ನದಿ ಉಕ್ಕಿ ಹರಿಯುತ್ತಿದ್ದು, ತಾಳಿಕೋಟಿ ಪಟ್ಟಣದ ಬಳಿಯ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಮುಳು ಗಡೆಯಾದ ಸೇತುವೆ ದಾಟಲು ಯತ್ನಿಸಿದ ಬೈಕ್ ಸವಾರನೊಬ್ಬ ಬೈಕ್ ಸಮೇತ ನೀರುಪಾಲಾಗಿದ್ದಾನೆ.
ನೀರುಪಾಲಾದ ಯುವಕನನ್ನು ಸಂತೋಷ ಹಡಪದ (22) ಎಂದು ಗುರುತಿಸಲಾಗಿದೆ. ದೃಷ್ಟವಶಾತ್ ಹಿಂಬದಿ ಸವಾರ ಅಪಾಯದಿಂದ ಪಾರಾಗಿದ್ದಾನೆ. ಮಹಾಂತೇಶ ಹೊಸಗೌಡ (20) ಅಪಾಯದಿಂದ ಪಾರಾದ ಯುವಕ. ಇವರಿಬ್ಬರೂ ವಡವಡಗಿ ಗ್ರಾಮದಿಂದ ತಾಳಿಕೋಟಿಪಟ್ಟಣಕ್ಕೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಸೇತುವೆ ಮುಳುಗಡೆಯಾಗಿದ್ದರಿಂದ ತಾಳಿಕೋಟಿ ವಿಜಯಪುರ ರಸ್ತೆ ಸಂಪರ್ಕ ಕಡಿತವಾಗಿದೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ ಯುವಕರು ಬೈಕ್ನಲ್ಲಿ ತೆರಳುವ ದುಸ್ಸಾಹಸ ಮಾಡಿದ್ದು ಈ ಅವಘಡಕ್ಕೆ ಕಾರಣವಾಗಿದೆ. ಈ ಘಟನೆಯ ಕುರಿತು ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಗ್ನಿಶಾಮಕ ದಳ ಮತ್ತು ಪೊಲೀಸರಿಂದ ಶೋಧ ಕಾರ್ಯಚರಣೆ ನಡೆಯುತ್ತಿದೆ. ನೀರುಪಾಲಾದ ಯುವಕನ ಪತ್ತೆಗಾಗಿ ಸ್ಥಳೀಯರು ಸಹ ಸಹಕಾರ ನೀಡುತ್ತಿದ್ದಾರೆ.





