Supreme Court : ಬಳಕೆದಾರರ ದತ್ತಾಂಶವನ್ನು ಕಮರ್ಷಿಯಲ್ ಆಗಿ ಬಳಸುತ್ತಿರುವ ಆರೋಪ ಎದುರಿಸುತ್ತಿರುವ ವಾಟ್ಸಾಪ್ ಮೇಲೆ ಸುಪ್ರೀಂಕೋರ್ಟ್ ಹರಿಹಾಯ್ದಿದೆ.

Supreme Court : ವಾಟ್ಸಾಪ್ನ 2021ರ ಗೌಪ್ಯತಾ ನೀತಿ (WhatsApp Privacy Policy) ವಿಚಾರವಾಗಿ ಮೆಟಾ (Meta) ವಿರುದ್ಧ ಭಾರತದ ಸುಪ್ರೀಂ ಕೋರ್ಟ್ ಕಠಿಣ ವಾಗ್ದಾಳಿ ನಡೆಸಿದೆ.
ಭಾರತೀಯ ಬಳಕೆದಾರರ ಗೌಪ್ಯತೆ ಯಾವುದೇ ಕಾರಣಕ್ಕೂ ರಾಜಿಯಾಗಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟ ಸಂದೇಶ ನೀಡಿದೆ. ‘ನೀವು ಭಾರತೀಯ ಬಳಕೆದಾರರ ಗೌಪ್ಯತೆಯೊಂದಿಗೆ ಆಟವಾಡಬೇಡಿ ಎಂದಿದೆ.
ನಮ್ಮ ಒಂದು ಡಿಜಿಟ್ ಡೇಟಾವನ್ನೂ ಪಡೆಯಲು ನಿಮಗೆ ಅವಕಾಶ ಕೊಡಲ್ಲ. ಗೌಪ್ಯತೆಯನ್ನು ರಕ್ಷಿಸಲು ಸಾಧ್ಯವಿಲ್ಲವೆಂದರೆ ಭಾರತದಿಂದ ನಿರ್ಗಮಿಸಿ’ ಎಂದು ವಾಟ್ಸಾಪ್ನ ಮಾತೃ ಸಂಸ್ಥೆಯಾದ ಮೆಟಾಗೆ ಸುಪ್ರೀಂ ಕೋರ್ಟ್ ತಿಳಿಸಿದೆ.
ವಾಟ್ಸಾಪ್ ತನ್ನ ಗೌಪ್ಯತಾ ನೀತಿಯ ಮೂಲಕ ಬಳಕೆದಾರರ ದತ್ತಾಂಶವನ್ನು ವಾಣಿಜ್ಯಾತ್ಮಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪದ ಹಿನ್ನೆಲೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಹೀಗಂದಿದೆ.
ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಅವರು, ‘ನಿಮಗೆ ನಮ್ಮ ಸಂವಿಧಾನವನ್ನು ಅನುಸರಿಸಲು ಆಗುವುದಿಲ್ಲವೆಂದರೆ ಭಾರತದಿಂದ ನಿರ್ಗಮಿಸಿ. ಯಾವುದೇ ಭಾರತೀಯ ಪ್ರಜೆಯ ಗೌಪ್ಯತೆಯನ್ನು ರಾಜಿಗೆ ಇಡುವುದಕ್ಕೆ ನಾವು ಅವಕಾಶ ಕೊಡುವುದಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ : ಚಾರ್ಮಾಡಿ ಘಾಟ್ ಅರಣ್ಯ ವ್ಯಾಪ್ತಿಯಲ್ಲಿ ಭಾರೀ ಕಾಡ್ಗಿಚ್ಚು.!

ವಾಟ್ಸಾಪ್ನ ಗೌಪ್ಯತಾ ನೀತಿ ಸಾಮಾನ್ಯ ಜನರಿಗೆ ಅರ್ಥವಾಗ್ತಿಲ್ಲ, ಇನ್ನು ‘ದೇಶದಲ್ಲಿರುವ ಕೋಟ್ಯಂತರ ಅನಕ್ಷರಸ್ಥರು ಮತ್ತು ಬಡವರಿಗೆ ಈ ಗೌಪ್ಯತಾ ನೀತಿ ಎಷ್ಟು ಅರ್ಥವಾಗುತ್ತದೆ? ಎಂದಿದ್ದಾರೆ.
ರಸ್ತೆಬದಿ ಅಂಗಡಿ ನಡೆಸುವವರು, ಬಡ ಮಹಿಳೆಯರು, ಬಿಹಾರದ ಗ್ರಾಮೀಣ ಪ್ರದೇಶದ ಜನರು, ತಮಿಳುನಾಡಿನಲ್ಲಿ ತಮಿಳು ಮಾತ್ರ ಮಾತನಾಡುವವರು—ಇವರಲ್ಲಿ ಎಷ್ಟು ಜನರಿಗೆ ನಿಮ್ಮ ನೀತಿ ಸ್ಪಷ್ಟವಾಗುತ್ತದೆ? ಎಂದು ಸಿಜೆಐ ಪ್ರಶ್ನಿಸಿದ್ದಾರೆ.
‘ನಿಮ್ಮ ನೀತಿಗಳನ್ನು ಅರ್ಥಮಾಡಿಕೊಳ್ಳಲು ನಮಗೆಯೇ ಕೆಲವೊಮ್ಮೆ ಕಷ್ಟವಾಗುತ್ತದೆ. ಇನ್ನು ಬಿಹಾರದ ಕುಗ್ರಾಮದಲ್ಲಿರುವ ವ್ಯಕ್ತಿಗೆ ಅದು ಹೇಗೆ ಅರ್ಥವಾಗುತ್ತದೆ?’ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ವಾಟ್ಸಾಪ್ನಲ್ಲಿ ಒಬ್ಬ ವೈದ್ಯರು ಮೂರು ಔಷಧಗಳ ಹೆಸರು ಕಳುಹಿಸಿದ ಕೆಲವೇ ನಿಮಿಷಗಳಲ್ಲಿ ಅದೇ ಔಷಧಗಳಿಗೆ ಸಂಬಂಧಿಸಿದ ಜಾಹೀರಾತುಗಳ ಪ್ರವಾಹವೇ ಕಾಣಿಸಿಕೊಳ್ಳುತ್ತದೆ. ಇದು ದತ್ತಾಂಶ ದುರ್ಬಳಕೆಯ ಸ್ಪಷ್ಟ ಸೂಚನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣವು ದೇಶದಲ್ಲಿ ಡಿಜಿಟಲ್ ಗೌಪ್ಯತೆ, ದತ್ತಾಂಶ ರಕ್ಷಣೆ ಮತ್ತು ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಗಳ ಜವಾಬ್ದಾರಿಗಳ ಕುರಿತು ಮತ್ತೆ ದೊಡ್ಡ ಚರ್ಚೆಗೆ ಕಾರಣವಾಗಿದೆ.
MUST WATCH : ಅಧಿವೇಶನದಲ್ಲಿ ಎಣ್ಣೆ ವಿಚಾರವಾಗಿ ವಿ.ಪ. ನಾಯಕ ಆರ್. ಅಶೋಕ್ ಫುಲ್ ಗರಂ




