ಕೇಂದ್ರ Budget 2026 ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಏಪ್ರಿಲ್ 1 ರಿಂದ ನೂತನ ಐಟಿ ಕಾಯ್ದೆ ಜಾರಿ..!

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2026ನೇ ಕೇಂದ್ರBudget ಅನ್ನು ಲೋಕಸಭೆಯಲ್ಲಿ ಮಂಡಿಸಿದರು. ಇದು ಅವರ ರಾಜಕೀಯ ಜೀವನದ 9ನೇ ಬಜೆಟ್ ಆಗಿದ್ದು,
ರವಿದಾಸ್ ಜಯಂತಿ ಹಾಗೂ ಮಾಘ ಪೂರ್ಣಿಮೆ ದಿನದಂದು ಬಜೆಟ್ ಮಂಡಿಸುತ್ತಿರುವುದಾಗಿ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ದೇಶದ ಆರ್ಥಿಕ ಬೆಳವಣಿಗೆಗೆ ದಿಕ್ಕು ನೀಡುವ ಹಲವಾರು ಮಹತ್ವದ ಘೋಷಣೆಗಳು ಈ ಬಜೆಟ್ನಲ್ಲಿ ಸೇರಿವೆ.
ಈ ಬಜೆಟ್ನ ಪ್ರಮುಖ ಘೋಷಣೆಯಾಗಿ ಏಪ್ರಿಲ್ 1 ರಿಂದ ನೂತನ ಆದಾಯ ತೆರಿಗೆ (IT) ಕಾಯ್ದೆ ಜಾರಿಗೊಳಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. ನೂತನ ಐಟಿ ಕಾಯ್ದೆಯಿಂದ ತೆರಿಗೆ ವ್ಯವಸ್ಥೆ ಇನ್ನಷ್ಟು ಸರಳ ಮತ್ತು ಪಾರದರ್ಶಕವಾಗಲಿದ್ದು,
ತೆರಿಗೆದಾರರಿಗೆ ಅನುಕೂಲವಾಗಲಿದೆ ಎಂಬ ವಿಶ್ವಾಸವನ್ನು ವಿತ್ತ ಸಚಿವೆ ವ್ಯಕ್ತಪಡಿಸಿದರು. ಇದರಿಂದ ತೆರಿಗೆ ನಿರ್ವಹಣೆ ಸುಧಾರಿಸಿ ಆರ್ಥಿಕ ಶಿಸ್ತು ಬಲಪಡಿಸುವ ನಿರೀಕ್ಷೆ ಇದೆ.
ಅದೇ ವೇಳೆ, ವಿದೇಶಿ ವಿನಿಮಯ ಕಾನೂನಿನಲ್ಲಿ ಪರಿಷ್ಕರಣೆ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಕ್ರಮದಿಂದ ವಿದೇಶಿ ಹೂಡಿಕೆದಾರರಿಗೆ ಹೆಚ್ಚಿನ ಅನುಕೂಲವಾಗಲಿದ್ದು,
ಭಾರತದಲ್ಲಿ ಹೂಡಿಕೆ ಮಾಡಲು ಉತ್ತೇಜನ ಸಿಗಲಿದೆ. ಇದರೊಂದಿಗೆ ದೇಶಕ್ಕೆ ಹೆಚ್ಚಿನ ವಿದೇಶಿ ಬಂಡವಾಳ ಹರಿದುಬರುವ ಸಾಧ್ಯತೆ ಹೆಚ್ಚಾಗಲಿದೆ ಎಂದು ಸರ್ಕಾರ ತಿಳಿಸಿದೆ..

ಈ ಬಜೆಟ್ನಲ್ಲಿ ಮಹಿಳಾ ಉದ್ಯಮಿಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು.
ಇದರಿಂದ ಮಹಿಳೆಯರು ಸ್ವಾವಲಂಬಿಗಳಾಗಲು ಹಾಗೂ ಹೊಸ ಉದ್ಯಮಗಳನ್ನು ಆರಂಭಿಸಲು ಸಹಕಾರಿಯಾಗಲಿದೆ.
ಆಯುರ್ವೇದ ಕ್ಷೇತ್ರಕ್ಕೂ ಈ ಬಜೆಟ್ನಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ. ಆಯುರ್ವೇದ ಉತ್ಪನ್ನಗಳ ರಫ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಮೂರು ಹೊಸ ಆಯುರ್ವೇದ ಸಂಸ್ಥೆಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.
ಪೂರ್ವ ಭಾರತದ ರಾಜ್ಯಗಳಲ್ಲಿ ಆಯುರ್ವೇದ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯ ಜೊತೆಗೆ ಐದು ವೈದ್ಯಕೀಯ ಕೇಂದ್ರಗಳ ಸ್ಥಾಪನೆಗೂ ಅನುದಾನ ಘೋಷಿಸಲಾಗಿದೆ. ಈ ಕ್ರಮದಿಂದ ವೈದ್ಯಕೀಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
ಮೂಲಸೌಕರ್ಯ ಅಭಿವೃದ್ಧಿಯ ಭಾಗವಾಗಿ ಮುಂದಿನ ವರ್ಷಗಳಲ್ಲಿ 20 ಹೊಸ ರಾಷ್ಟ್ರೀಯ ಜಲಮಾರ್ಗಗಳ ನಿರ್ಮಾಣ ಗುರಿ ಹೊಂದಲಾಗಿದೆ ಎಂದು ವಿತ್ತ ಸಚಿವೆ ಘೋಷಿಸಿದರು.
ಜಲ ಸಾರಿಗೆಯ ವಿಸ್ತರಣೆಯಿಂದ ವ್ಯಾಪಾರ ಮತ್ತು ಸಾರಿಗೆ ವೆಚ್ಚ ಕಡಿಮೆಯಾಗುವ ಜೊತೆಗೆ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಲಿವೆ ಎಂಬ ನಿರೀಕ್ಷೆ ಇದೆ.

ಹೈ ಸ್ಪೀಡ್ ರೈಲ್ವೆ ಕಾರಿಡಾರ್ ಘೋಷಣೆ
ಇದಲ್ಲದೆ, ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಾಣದ ಮಹತ್ವದ ಘೋಷಣೆಯನ್ನು ನಿರ್ಮಲಾ ಸೀತಾರಾಮನ್ ಮಾಡಿದರು. ಮುಂಬೈ–ಪುಣೆ, ಪುಣೆ–ಹೈದರಾಬಾದ್, ಹೈದರಾಬಾದ್–ಬೆಂಗಳೂರು, ಹೈದರಾಬಾದ್–ಚೆನ್ನೈ, ಚೆನ್ನೈ–ಬೆಂಗಳೂರು, ದೆಹಲಿ–ವಾರಣಾಸಿ ಮತ್ತು ವಾರಣಾಸಿ–ಸಿಲಿಗುರಿ ಮಾರ್ಗಗಳಲ್ಲಿ ಹೈ ಸ್ಪೀಡ್ ರೈಲು ಯೋಜನೆ ಜಾರಿಗೊಳ್ಳಲಿದೆ.
ಈ ಯೋಜನೆಯಿಂದ ವೇಗದ ಪ್ರಯಾಣದ ಜೊತೆಗೆ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ.
ಒಟ್ಟಿನಲ್ಲಿ, Union Budget 2026 ನೂತನ ಐಟಿ ಕಾಯ್ದೆ, ವಿದೇಶಿ ಹೂಡಿಕೆ ಉತ್ತೇಜನ, ಮಹಿಳಾ ಉದ್ಯಮಿಗಳಿಗೆ ಬೆಂಬಲ, ಆಯುರ್ವೇದ ಮತ್ತು ವೈದ್ಯಕೀಯ ಪ್ರವಾಸೋದ್ಯಮ,
ಜೊತೆಗೆ ಜಲಮಾರ್ಗ ಹಾಗೂ ಹೈ ಸ್ಪೀಡ್ ರೈಲ್ವೆ ಯೋಜನೆಗಳ ಮೂಲಕ ಭಾರತದ ಸಮಗ್ರ ಅಭಿವೃದ್ಧಿಗೆ ಬಲವಾದ ಅಡಿಪಾಯ ಹಾಕಿದೆ.




