SSLC, PUC ಪ್ರಶ್ನೆಪತ್ರಿಕೆ ಲೀಕ್ ಆದರೆ ಪ್ರಿನ್ಸಿಪಾಲ್ ವಿರುದ್ಧ ಕೇಸ್.

SSLC ಹಾಗೂ PUC ಪೂರ್ವ ಸಿದ್ಧತಾ ಪರೀಕ್ಷೆ–1ರ ಕೆಲ ಪ್ರಶ್ನೆಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ, ಜನವರಿ 19ರಿಂದ ಆರಂಭವಾಗಲಿರುವ ಪೂರ್ವ ಸಿದ್ಧತಾ ಪರೀಕ್ಷೆ–2ರಲ್ಲಿ ಇಂತಹ ಲೋಪಗಳು ಮರುಕಳಿಸದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ಈ ಸಂಬಂಧ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ನೋಡೆಲ್ ಕೇಂದ್ರಗಳ ಪ್ರಾಂಶುಪಾಲರ ಮೇಲೆ ಕಠಿಣ ಹೊಣೆಗಾರಿಕೆ ವಿಧಿಸಲಾಗಿದೆ.
ಪ್ರಿನ್ಸಿಪಾಲ್ ವಿರುದ್ಧ ಕೇಸ್
ನೋಡಲ್ ಕೇಂದ್ರದಿಂದ ಪ್ರಶ್ನೆಪತ್ರಿಕೆ ಸೋರಿಕೆಯಾದಲ್ಲಿ ಸಂಬಂಧಿಸಿದ ಪ್ರಾಂಶುಪಾಲರ ವಿರುದ್ಧ FIR ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ನಿಯಮಾನುಸಾರ ಶಿಸ್ತು ಕ್ರಮವೂ ಜರುಗಲಿದೆ.
ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಗಳನ್ನು ವಾಟ್ಸ್ಅಪ್, ಯೂಟ್ಯೂಬ್, ಇನ್ಸ್ಟಾಗ್ರಾಂ ಅಥವಾ ಇತರೆ ಯಾವುದೇ ಸಾಮಾಜಿಕ ಮಾಧ್ಯಮ ಗಳಲ್ಲಿ ಬಹಿರಂಗ ಪಡಿಸಿದರೆ, ಅವರ ಮೇಲೂ ಕಾನೂನು ಕ್ರಮ ಕೈಗೊಳ್ಳ ಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಎಚ್ಚರಿಕೆ ನೀಡಿದೆ
ಅನುದಾನಿತ ಕಾಲೇಜುಗಳಿಂದ ಪ್ರಶ್ನೆಪತ್ರಿಕೆ ಬಹಿರಂಗವಾದಲ್ಲಿ, ಆ ಕಾಲೇಜಿನ ಅನುದಾನ ಹಿಂಪಡೆಯಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು.
ಪರೀಕ್ಷಾ ಕೇಂದ್ರದಲ್ಲೇ ಸೋರಿಕೆ ನಡೆದರೆ, ಅಂತಹ ಕೇಂದ್ರವನ್ನೇ ರದ್ದುಪಡಿಸುವ ಕ್ರಮಕ್ಕೂ ಇಲಾಖೆ ಮುಂದಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಡಿಡಿಪಿಯು ಹಾಗೂ ಮುದ್ರಣಾಲಯಕ್ಕೆ ಕಟ್ಟುನಿಟ್ಟಿನ ಸೂಚನೆ
ಪ್ರಶ್ನೆಪತ್ರಿಕೆಗಳನ್ನು ಜಿಲ್ಲಾ ಉಪನಿರ್ದೇಶಕರು (ಡಿಡಿಪಿಯು) ಒಂದೇ ಐಪಿ ವಿಳಾಸ ಮತ್ತು ಒಂದೇ ಗಣಕ ಯಂತ್ರದಲ್ಲಿ ಮಾತ್ರ ಡೌನ್ಲೋಡ್ ಮಾಡಬೇಕು.
ನಿಯಮ ಉಲ್ಲಂಘಿಸಿದರೆ ಸಂಬಂಧಪಟ್ಟ ಉಪನಿರ್ದೇಶಕರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ ಜಿಲ್ಲೆಯಲ್ಲಿ ಪ್ರಶ್ನೆಪತ್ರಿಕೆ ಮುದ್ರಣಾಲಯವನ್ನು ಡಿಡಿಪಿಯು ಮುಂಚಿತವಾಗಿಯೇ ಗುರುತಿಸಬೇಕು.
ಮುದ್ರಣ ಕಾರ್ಯ ನಡೆಯುವ ವೇಳೆ ಖಾಸಗಿ ಮುದ್ರಣ ಚಟುವಟಿಕೆಗಳು ಹಾಗೂ ಅನಧಿಕೃತ ವ್ಯಕ್ತಿಗಳ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ.
ಕೇವಲ ಸರ್ಕಾರಿ ಪಿಯು ಕಾಲೇಜುಗಳನ್ನು ಮಾತ್ರ ನೋಡೆಲ್ ಕೇಂದ್ರಗಳಾಗಿ ಗುರುತಿಸಬೇಕು. ಆ ಕೇಂದ್ರದ ಪ್ರಾಂಶುಪಾಲರು ಹಾಗೂ ಒಬ್ಬ ಉಪನ್ಯಾಸಕರನ್ನು ಪ್ರಶ್ನೆಪತ್ರಿಕೆ ಪಾಲಕರಾಗಿ ನೇಮಿಸಿ ಸಂರಕ್ಷಣೆ ಮತ್ತು ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ವಹಿಸಬೇಕು.
ಇದನ್ನು ಓದಿ : ಕ್ರಿಕೆಟಿಗ Suruya Kumar ವಿರುದ್ಧ ಹೇಳಿಕೆ – ನಟಿ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ!

ವಾಟರ್ಮಾರ್ಕ್, ಸೀಲ್ ಮತ್ತು ಹಸ್ತಾಂತರ ಪ್ರಕ್ರಿಯೆ
ನೋಡಲ್ ಕೇಂದ್ರದ ಕಾಲೇಜು ಕೋಡ್ ಅನ್ನು ವಾಟರ್ಮಾರ್ಕ್ ಆಗಿ ಹೊಂದಿರುವ ಪ್ರಶ್ನೆಪತ್ರಿಕೆಗಳನ್ನೇ ಡೌನ್ಲೋಡ್ ಮಾಡಬೇಕು. ಮುದ್ರಣ ಮತ್ತು ಪ್ಯಾಕಿಂಗ್ ಕಾರ್ಯವನ್ನು ಬದಲಾಯಿಸಲಾಗದ ಸೀಲ್ ಬಳಸಿ ನಿಗದಿತ ಮುದ್ರಣಾಲಯದಲ್ಲೇ ಪೂರ್ಣಗೊಳಿಸಬೇಕು.
ಸೀಲ್ ಮಾಡಿರುವ ಪ್ರಶ್ನೆಪತ್ರಿಕೆ ಪ್ಯಾಕೆಟ್ಗಳನ್ನು ಡಿಡಿಪಿಯು ಕಚೇರಿಯಲ್ಲಿ ನೋಡೆಲ್ ಕೇಂದ್ರದ ಪ್ರಾಂಶುಪಾಲರು ಹಾಗೂ ಪ್ರಶ್ನೆಪತ್ರಿಕೆ ಪಾಲಕರಿಗೆ ಹಸ್ತಾಂತರಿಸಬೇಕು. ನಂತರದ ಸಂಪೂರ್ಣ ಹೊಣೆಗಾರಿಕೆ ನೋಡೆಲ್ ಕೇಂದ್ರದವರದ್ದಾಗಿರುತ್ತದೆ.
ಪ್ರಾಂಶುಪಾಲರ ಹೊಣೆ
ನೋಡಲ್ ಕೇಂದ್ರದ ಒಂದು ಕೋಣೆಯಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಿ ಪ್ರಶ್ನೆಪತ್ರಿಕೆಗಳನ್ನು ಸುರಕ್ಷಿತವಾಗಿಟ್ಟು ಸೀಲ್ ಮಾಡಬೇಕು.
ಪ್ರತಿ ದಿನ ಬೆಳಗ್ಗೆ 8.30ಕ್ಕೆ ಆಯಾ ದಿನದ ಪರೀಕ್ಷಾ ವಿಷಯಗಳ ಪ್ರಶ್ನೆಪತ್ರಿಕೆಗಳನ್ನು ಮಾತ್ರ ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರಿಗೆ ನೀಡಬೇಕು.

ಯಾವುದೇ ಕಾರಣಕ್ಕೂ ಮೊದಲ ದಿನವೇ ಎಲ್ಲ ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನು ಕಾಲೇಜುಗಳಿಗೆ ನೀಡುವಂತಿಲ್ಲ. ಕಾಲೇಜಿನ ಪ್ರಾಂಶುಪಾಲರು ಪ್ರಶ್ನೆ ಪತ್ರಿಕೆ ಪ್ಯಾಕೆಟ್ಗಳನ್ನು ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ಮುಂದೆಯೇ ತೆರೆಯಬೇಕು. ಈ ಸಂಬಂಧ ಕನಿಷ್ಠ ಇಬ್ಬರು ವಿದ್ಯಾರ್ಥಿಗಳು ಪ್ರಮಾಣೀಕರಿಸಬೇಕು ಎಂದು ಸೂಚಿಸಲಾಗಿದೆ.
ಇದನ್ನು ನೋಡಿ : ಕ್ಯಾನ್ಸರ್ ರೋಗಿ ಮೇಲೆ ಖಾಕಿ ದರ್ಪ..? – ಪಾಪ..ಹೊಡೆದು ಮೂಳೆ ಮುರಿದ್ರಂತೆ




