Chikkaballapur : ಪವಿತ್ರವೆಂದು ಪರಿಗಣಿಸಲ್ಪಡುವ ಅಣ್ಣ-ತಂಗಿ ಸಂಬಂಧಕ್ಕೆ ಮಸಿ ಬಳಿದ ಭೀಕರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

Chikkaballapur :ಅಣ್ಣ-ತಂಗಿಯ ಮಧ್ಯೆ ಬೆಳೆದ ಅಕ್ರಮ ಪ್ರೀತಿ, ಲಿವಿಂಗ್ ರಿಲೇಶನ್ಶಿಪ್ ಹಂತಕ್ಕೆ ತಲುಪಿ, ಕೊನೆಗೆ ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗುವ ಮೂಲಕ ದುರಂತವಾಗಿ ಅಂತ್ಯವಾಗಿದೆ.
ಲಿವಿಂಗ್ ರಿಲೇಶನ್ಶಿಪ್ನಲ್ಲಿದ್ದ ಅಣ್ಣ-ತಂಗಿ
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ರಾಮಕೃಷ್ಣಪುರದ ನಿವಾಸಿಗಳಾದ ಕೃಷ್ಣ (30) ಮತ್ತು ರಾಮಲಕ್ಷ್ಮಿ (21) ಸಂಬಂಧದಲ್ಲಿ ಅಣ್ಣ-ತಂಗಿ.
ಆದರೆ ಪವಿತ್ರ ಸಂಬಂಧವನ್ನು ಮರೆತು, ಇಬ್ಬರೂ ಪರಸ್ಪರ ಅಕ್ರಮ ಪ್ರೀತಿ ಸಂಬಂಧ ಹೊಂದಿ ಲಿವಿಂಗ್ ರಿಲೇಶನ್ಶಿಪ್ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.

ಈ ಜೋಡಿ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡು ಕಳೆದ ಕೆಲಕಾಲದಿಂದ ವಾಸವಿದ್ದರು.
ಇಂದು ಬೆಳಿಗ್ಗೆ 21 ವರ್ಷದ ರಾಮಲಕ್ಷ್ಮಿ ಮನೆಯೊಳಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಈ ಘಟನೆ ಪೆರೇಸಂದ್ರ ಗ್ರಾಮದಲ್ಲಿ ನಡೆದಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೂರು ವರ್ಷಗಳಿಂದ ಅನೈತಿಕ ಸಂಬಂಧ
ಮೂಲಗಳ ಪ್ರಕಾರ, ರಾಮಲಕ್ಷ್ಮಿ ಮತ್ತು ಕೃಷ್ಣ ಕಳೆದ ಮೂರು ವರ್ಷಗಳಿಂದ ಪ್ರೀತಿ-ಪ್ರೇಮದ ಹೆಸರಿನಲ್ಲಿ ಅನೈತಿಕ ಸಂಬಂಧ ಹೊಂದಿದ್ದರು.
ಈ ವಿಷಯ ತಿಳಿದ ಎರಡು ಕುಟುಂಬಗಳ ಬಂಧು ಬಳಗ ಹಲವಾರು ಬಾರಿ ಬುದ್ಧಿವಾದ ಹೇಳಿದರೂ, ಸಂಬಂಧ ಮುಂದುವರಿದಿತ್ತು.

ಕೊನೆಗೆ ಕುಟುಂಬದ ಒತ್ತಡದಿಂದ ಅವರು ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದರು.ಅತ್ಯಂತ ಗಂಭೀರ ಸಂಗತಿಯೆಂದರೆ, ಕೃಷ್ಣನಿಗೆ ಈಗಾಗಲೇ ಪತ್ನಿ ಹಾಗೂ ಮಗ ಇದ್ದರೂ,
ಕುಟುಂಬದವರು ಆತನಿಗೆ ಬೇರೆ ಯುವತಿಯೊಂದಿಗೆ ಮದುವೆ ಮಾಡಿದ್ದರೂ,ತಂಗಿ ರಾಮಲಕ್ಷ್ಮಿಯನ್ನು ಬಿಡದೆ ಕಳ್ಳ ಸಂಸಾರ ನಡೆಸುತ್ತಿದ್ದ ಎಂಬ ಆರೋಪಗಳು ಕೇಳಿಬಂದಿವೆ.
ರಾಮಲಕ್ಷ್ಮಿಯ ಅಕ್ಕ, “ನನ್ನ ತಂಗಿಯ ಸಾವಿಗೆ ಕೃಷ್ಣನೇ ಕಾರಣ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.ಈ ದುರಂತದ ನಂತರ ಕೃಷ್ಣ ಭಯದಿಂದ ನಾಪತ್ತೆಯಾಗಿದ್ದಾನೆ ಎನ್ನಲಾಗಿದ್ದು, ಪೊಲೀಸರು ಆತನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿದಿದೆ.
ಒಟ್ಟಿನಲ್ಲಿ, ಜನ್ಮಜನ್ಮದ ಅನುಬಂಧವೆಂದು ಕರೆಯಲ್ಪಡುವ ಅಣ್ಣ-ತಂಗಿ ಸಂಬಂಧಕ್ಕೆ ಕಳಂಕ ತಂದು,
ತಂಗಿ ಸಾವಿನ ಮನೆ ಸೇರಿದರೆ, ಅಣ್ಣ ಕಾನೂನಿನಿಂದ ತಪ್ಪಿಸಿಕೊಳ್ಳಲು ನಾಪತ್ತೆಯಾಗಿರುವುದು ಸಮಾಜದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.




