Belagavi : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಬಳಿ ಇರುವ ಇನಾಮ್ದಾರ್ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಬಾಯ್ಲರ್ ಸ್ಫೋಟ (Boiler Explosion) ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

Belagavi : ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಕಾರ್ಮಿಕರು ಇಂದು ಒಂದೇ ದಿನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿ, ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದು, ಈ ಮೂಲಕ ಒಟ್ಟು ಮೃತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಮೃತಪಟ್ಟ ಕಾರ್ಮಿಕರ ವಿವರ
ಈ ದುರಂತದಲ್ಲಿ ಸಾವನ್ನಪ್ಪಿರುವ ಕಾರ್ಮಿಕರ ವಿವರ ಈ ಕೆಳಗಿನಂತಿದೆ:
- ಅಕ್ಷಯ ತೋಪಡೆ
- ದೀಪಕ್ ಮುನವಳ್ಳಿ
- ಸುದರ್ಶನ ಬನೋಶಿ
- ಮಂಜುನಾಥ ಮಡಿವಾಳಪ್ಪ ಕಾಜಗಾರ್ (ಅರವಳ್ಳಿ, ಬೈಲಹೊಂಗಲ)
- ಭರತೇಶ ಸಾರವಾಡಿ (ಗೊಡಚಿನಮಲ್ಕಿ, ಗೋಕಾಕ್)
- ಮಂಜುನಾಥ ತೇರದಾಳ (ತೇರದಾಳ–ಅಥಣಿ)
- ಗುರುಪಾದಪ್ಪ ತಮ್ಮನ್ನವರ್ (ಮರೆಗುದ್ದಿ, ಬಾಗಲಕೋಟ)
ಇದನ್ನು ಓದಿ : ಸಂಚಲನ ಸೃಷ್ಟಿಸಿದ CM ಸಿದ್ದರಾಮಯ್ಯ ಹೇಳಿಕೆ!

ಬಾಯ್ಲರ್ ಸ್ಫೋಟ ಹೇಗೆ ಸಂಭವಿಸಿತು?
ಬುಧವಾರ ಇನಾಮ್ದಾರ್ ಸಕ್ಕರೆ ಕಾರ್ಖಾನೆಯಲ್ಲಿ ವಾಲ್ ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಬಾಯ್ಲರ್ ವಾಲ್ ಸ್ಫೋಟಗೊಂಡಿದೆ.
ಈ ವೇಳೆ ಕುದಿಯುತ್ತಿರುವ ಕಬ್ಬಿನ ಹಾಲು ಕಾರ್ಮಿಕರ ಮೇಲೆ ಬಿದ್ದ ಪರಿಣಾಮ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಘಟನೆಯ ಬಳಿಕ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಒಂದೊಂದಾಗಿ ಸಾವನ್ನಪ್ಪುತ್ತಿದ್ದಾರೆ.
ಕಾರ್ಖಾನೆ ವಿಕ್ರಮ ಇನಾಮದಾರ್ ಅವರಿಗೆ ಸೇರಿದ್ದು, ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

ಸರ್ಕಾರ ಮತ್ತು ಕಾರ್ಖಾನೆ ಆಡಳಿತ ವಿರುದ್ಧ ಆಕ್ರೋಶ
ಘಟನೆಗೆ ಸಂಬಂಧಿಸಿ ಬೆಳಗಾವಿಯಲ್ಲಿ ಮೃತ ಕಾರ್ಮಿಕರ ಕುಟುಂಬಸ್ಥರು ರಾಜ್ಯ ಸರ್ಕಾರ ಹಾಗೂ ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- ಪರಿಹಾರ ಘೋಷಣೆ ಮಾಡಿಲ್ಲ
- ಕಾರ್ಖಾನೆ ಆಡಳಿತ ಸ್ಪಂದಿಸುತ್ತಿಲ್ಲ
- ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ
ಎಂಬ ಆರೋಪಗಳನ್ನು ಕುಟುಂಬಸ್ಥರು ಮಾಡಿದ್ದಾರೆ.

ಪರಿಹಾರ ನೀಡುವವರೆಗೆ ಶವ ತೆಗೆದುಕೊಳ್ಳಲ್ಲ: ಕುಟುಂಬಸ್ಥರ ಪಟ್ಟು
ಮೃತ ಕಾರ್ಮಿಕರ ಕುಟುಂಬಸ್ಥರು,
“ಅವರ ಹುದ್ದೆಗೆ ತಕ್ಕಂತೆ ಸಮರ್ಪಕ ಪರಿಹಾರ ನೀಡಬೇಕು. ಪರಿಹಾರ ಘೋಷಿಸುವವರೆಗೂ ಶವ ತೆಗೆದುಕೊಂಡು ಹೋಗುವುದಿಲ್ಲ”
ಎಂದು ಪಟ್ಟು ಹಿಡಿದಿದ್ದಾರೆ.
ಶವಾಗಾರದ ಮುಂಭಾಗದಲ್ಲೇ ಶವಗಳನ್ನು ಇಟ್ಟು ಕುಟುಂಬಸ್ಥರು ಧರಣಿ ನಡೆಸುತ್ತಿದ್ದಾರೆ. ಪರಿಸ್ಥಿತಿ ಉದ್ವಿಗ್ನವಾಗಿದ್ದು, ಪೊಲೀಸರ ನಿಯೋಜನೆ ಮಾಡಲಾಗಿದೆ.
ಇದನ್ನು ನೋಡಿ : BIG NEWS : ಬಳ್ಳಾರಿಯ ನೂತನ ವಲಯ ಐಜಿಪಿ ಆಗಿ ಡಾ.ಪಿಎಸ್ ಹರ್ಷ ಅಧಿಕಾರ ಸ್ವೀಕಾರ




