Bengaluru : ಗಂಡು ಮಗು ಆಗಲಿಲ್ಲ ಎಂಬ ಕಾರಣಕ್ಕೆ ಕೈಕೊಟ್ಟ ಪತಿ – ಮಹಿಳೆಯ ಕಣ್ಣೀರಿನ ಹೋರಾಟ..

Bengaluru : ಗಂಡು ಮಗು ಬೇಕೆಂಬ ಹಪಾಹಪಿಯಲ್ಲಿ ಮೂರು ಹೆಣ್ಣು ಮಕ್ಕಳನ್ನು ಹೆತ್ತ ಹೆಂಡತಿ ಮತ್ತು ಮಕ್ಕಳನ್ನು ಬಿಟ್ಟು ಪತಿ ಪರಾರಿಯಾದ ಅಮಾನುಷ ಘಟನೆ ಬೆಂಗಳೂರು ಉತ್ತರದ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯ ದ್ವಾರಕನಗರದಲ್ಲಿ ಬೆಳಕಿಗೆ ಬಂದಿದೆ.
ಮಕ್ಕಳೊಂದಿಗೆ ಧರಣಿ
ಹಸುಗೂಸು ಸೇರಿ ಮೂರು ಹೆಣ್ಣು ಮಕ್ಕಳನ್ನು ಕೈಯಲ್ಲಿ ಹಿಡಿದುಕೊಂಡು ಮಹಿಳೆಯೊಬ್ಬರು ಧರಣಿ ಕೂತು ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಸಂತ್ರಸ್ತ ಮಹಿಳೆ ವರಲಕ್ಷ್ಮಿ ಎಂದು ಗುರುತಿಸಲಾಗಿದೆ. “ಮೂರು ಹೆಣ್ಣು ಮಕ್ಕಳು ಜನಿಸಿದ್ದಕ್ಕೆ ನನ್ನ ಗಂಡ ನನ್ನನ್ನು ಬಿಟ್ಟು ಓಡಿ ಹೋಗಿದ್ದಾನೆ. ನನ್ನ ಮಕ್ಕಳಿಗೆ ನ್ಯಾಯ ಕೊಡಿಸಿ” ಎಂದು ಆಕೆ ಕಣ್ಣೀರಿಡುತ್ತಿದ್ದಾರೆ.
2014ರಲ್ಲಿ ದ್ವಾರಕನಗರದ ಫಾರ್ಮಸಿಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ವರಲಕ್ಷ್ಮಿ, ಅದೇ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ ಹರೀಶ್ ಎಂಬಾತನನ್ನು ಪ್ರೀತಿಸಿ ಕುಟುಂಬದ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದರು.
ವರಲಕ್ಷ್ಮಿ ಆಂಧ್ರ ಮೂಲದವರಾಗಿದ್ದು, ಹರೀಶ್ ರಾಜಸ್ಥಾನ ಮೂಲದವರು.
ಗಂಡು ಮಗು ಆಸೆಯಿಂದ ದೂರವಾದ ಪತಿ
ವಿವಾಹದ ಬಳಿಕ ವರ್ಷಗಳ ಅವಧಿಯಲ್ಲಿ ಒಂದರ ಹಿಂದೆ ಒಂದಾಗಿ ಮೂರು ಹೆಣ್ಣು ಮಕ್ಕಳು ಜನಿಸಿದರು. ಆದರೆ ಪತಿ ಹರೀಶ್ಗೆ ಗಂಡು ಮಗು ಬೇಕೆಂಬ ಆಸೆ ಹೆಚ್ಚುತ್ತಾ ಹೋಗಿತ್ತು.
ಮೂರನೇ ಗರ್ಭವೂ ಹೆಣ್ಣು ಮಗು ಎಂದು ತಿಳಿದ ನಂತರ, ಕಳೆದ ಒಂದು ವರ್ಷದಿಂದ ಪತ್ನಿಯಿಂದ ದೂರವಿದ್ದು, ಇತ್ತೀಚೆಗೆ ಸಂಪೂರ್ಣವಾಗಿ ಮನೆಗೆ ಬಾರದೇ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಪತಿ ಮತ್ತೊಬ್ಬ ಯುವತಿಯೊಂದಿಗೆ ಮದುವೆಯಾಗಿದ್ದಾನೆ ಹಾಗೂ 10 ಲಕ್ಷ ರೂಪಾಯಿಗೂ ಹೆಚ್ಚು ಸಾಲ ಮಾಡಿದ್ದಾನೆ ಎಂದು ವರಲಕ್ಷ್ಮಿ ಆರೋಪಿಸಿದ್ದಾರೆ.
ಅಲ್ಲದೆ, ಪತಿ ಕೆಲಸ ಮಾಡುತ್ತಿದ್ದ ಮೆಡಿಕಲ್ ಸ್ಟೋರ್ನವರು “ನೀನು ನಮ್ಮ ಊರಿನವನು, ಬೇರೆ ರಾಜ್ಯದ ಮಹಿಳೆಯೊಂದಿಗೆ ಯಾಕೆ ಜೀವನ?” ಎಂದು ಮತ್ತೊಂದು ಮದುವೆಗೆ ಪ್ರೋತ್ಸಾಹ ನೀಡಿದ್ದಾರೆ ಎಂಬ ಗಂಭೀರ ಆರೋಪವೂ ಮಾಡಿದ್ದಾರೆ.

ಆರೋಪ ನಿರಾಕರಿಸಿದ ಮೆಡಿಕಲ್ ಸ್ಟೋರ್ ಮಾಲೀಕ
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಮೆಡಿಕಲ್ ಸ್ಟೋರ್ನ ಅಶೋಕ್, “2016ರಲ್ಲಿ ಇಬ್ಬರೂ ನಮ್ಮ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರೀತಿಸಿ ಮದುವೆಯಾದರು. ನಂತರ ಫಾರ್ಮಸಿ ಬಂದ್ ಆಯಿತು. ಆಮೇಲೆ ನನಗೆ ಯಾವುದೇ ಸಂಪರ್ಕ ಇಲ್ಲ. ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಕಾನೂನು ಹೋರಾಟ ಮಾಡುತ್ತೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಏಳು ಜನರ ವಿರುದ್ಧ ಪ್ರಕರಣ ದಾಖಲು
ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಪತಿ, ಆತನ ಕುಟುಂಬಸ್ಥರು ಹಾಗೂ ಮೆಡಿಕಲ್ ಸ್ಟೋರ್ನ ಅಶೋಕ್ ಸೇರಿ ಒಟ್ಟು ಏಳು ಜನರ ವಿರುದ್ಧ ಈಶಾನ್ಯ ವಿಭಾಗದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಪ್ರಕರಣ ದಾಖಲಾಗಿದ್ದು ಒಂದು ತಿಂಗಳಾದರೂ ನ್ಯಾಯ ಸಿಕ್ಕಿಲ್ಲ ಎಂದು ವರಲಕ್ಷ್ಮಿ ಆರೋಪಿಸುತ್ತಿದ್ದಾರೆ.

ನ್ಯಾಯಕ್ಕಾಗಿ ಮಾಧ್ಯಮಗಳ ಮೊರೆ
“ಪೊಲೀಸರು ಹಣ ಪಡೆದು ಸುಮ್ಮನಾಗಿದ್ದಾರೆ” ಎಂಬ ಗಂಭೀರ ಆರೋಪವನ್ನು ಮಹಿಳೆ ಮಾಡಿದ್ದು, ಮಾಧ್ಯಮಗಳ ವರದಿಯಿಂದಾದರೂ ತನಗೆ ಹಾಗೂ ತನ್ನ ಮಕ್ಕಳಿಗೆ ನ್ಯಾಯ ಸಿಗಲಿ ಎಂಬ ನಿರೀಕ್ಷೆಯಲ್ಲಿ ಇದ್ದಾರೆ.




