Ballari ನಿಯೋಜನೆಗೊಂಡಿದ್ದ SP ಪವನ್ ನಿಜ್ಜೂರು ಪಾರ್ಟಿ ಮೂಡ್ನಲ್ಲಿದ್ದ ಕಾರಣ ಅವರನ್ನು ಸರ್ಕಾರ ಅಮಾನತು (Suspend) ಮಾಡಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

Ballari ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ನಿವಾಸದ ಮುಂದೆ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವನ್ ನಿಜ್ಜೂರು ಅವರನ್ನು ಸರ್ಕಾರ ಶುಕ್ರವಾರ ರಾತ್ರಿ ಅಮಾನತು ಮಾಡಿ ಆದೇಶ ಪ್ರಕಟಿಸಿತ್ತು.
ಸರ್ಕಾರದ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ರಾಜಕಾರಣಿಗಳು ಮಾಡುವ ತಪ್ಪಿಗೆ ಪೊಲೀಸರಿಗೆ ಶಿಕ್ಷೆ ಎಂಬ ಟೀಕೆಗಳು ಬರತೊಡಗಿದವು. ಆದರೆ ಈಗ ಅಮಾನತಿಗೆ ನಿಜವಾದ ಕಾರಣ ಲಭ್ಯವಾಗಿದೆ.

ಯಾಕೆ ಅಮಾನತು?
ಜ.1 ರಂದು ಬಳ್ಳಾರಿ ಎಸ್ಪಿಯಾಗಿ ಪವನ್ ನೆಜ್ಜೂರ್ (Pavan Nejjuru) ಶೋಭಾರಾಣಿ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಸ್ವೀಕರಿಸಿದ ನಂತರ ಶೋಭಾರಾಣಿ ಅವರು ತಮ್ಮ ಸಿಬ್ಬಂದಿಗೆ ಪಾರ್ಟಿ ನೀಡಿದ್ದರು. ಈ ಪಾರ್ಟಿಯಲ್ಲಿ ಪವನ್ ನಿಜ್ಜೂರು ಮದ್ಯ ಸೇವಿಸಿದ್ದರು
ಸಂಜೆ ವೇಳೆ ಶಾಸಕ ಜನಾರ್ದನ ರೆಡ್ಡಿ ನಿವಾಸದ ಮುಂದೆ ಗಲಾಟೆ ಆರಂಭವಾಗಿತ್ತು. ಗಲಾಟೆ ನಡೆಯುತ್ತಿದ್ದರೂ ಪವನ್ ಅವರು ಸ್ಥಳಕ್ಕೆ ಹೋಗಿರಲಿಲ್ಲ. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳಿಗೆ ಅವರು ಮಾಹಿತಿ ನೀಡಬೇಕಿತ್ತು. ಗಲಾಟೆ ವಿಕೋಪಕ್ಕೆ ತಿರುಗಿದ ಬೆನ್ನಲ್ಲೇ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಆರ್. ಹಿತೇಂದ್ರ ಮತ್ತು ಡಿಜಿ & ಐಜಿ ಸಲೀಂ ಫೋನ್ ಮಾಡಿದರೂ ಪವನ್ ಅವರು ಕರೆಯನ್ನೇ ಸ್ವೀಕರಿಸಿರಲಿಲ್ಲ. ಕೂಡಲೇ ಚಿತ್ರದುರ್ಗದ ಎಸ್ಪಿಗೆ ಸ್ಥಳಕ್ಕೆ ಹೋಗುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದರು.

ಕೊನೆಗೆ ರಾತ್ರಿ ಪವನ್ ನೆಜ್ಜೂರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಪವನ್ ಅವರು ಸ್ಥಳಕ್ಕೆ ಭೇಟಿ ನೀಡುವ ಮೊದಲೇ ಉಳಿದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಅತಿಯಾದ ಕುಡಿತದಿಂದ ನಿಯಂತ್ರಣ ಕಳೆದುಕೊಂಡಿದ್ದರಿಂದ ಮಾಧ್ಯಮಗಳ ಮುಂದೆ ಪವನ್ ಬಾರದಂತೆ ಹಿರಿಯ ಅಧಿಕಾರಿಗಳು ನೋಡಿಕೊಂಡಿದ್ದರು.
ಬಳ್ಳಾರಿ ರೇಂಜ್ ಡಿಐಜಿ ಆಗಿರುವ ವರ್ತಿಕಾ ಕಟಿಯಾರ್ ಈ ಎಲ್ಲಾ ವಿಚಾರಗಳನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು. ಈ ವಿಚಾರ ಸರ್ಕಾರದ ಗಮನಕ್ಕೆ ಬಂದ ಬೆನ್ನಲ್ಲೇ ಅವರನ್ನು ಅಮಾನತು ಮಾಡುವ ನಿರ್ಧಾರ ಕೈಗೊಂಡಿದೆ.




