Bengaluru : ಅರ್ಧದಲ್ಲೇ ಹನಿಮೂನ್ನಿಂದ ವಾಪಸ್ಸಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ನವವಧು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ನವವಧುವನ್ನು ಗಾನವಿ (26) ಎಂದು ಗುರುತಿಸಲಾಗಿದೆ.

Bengaluru :
ಗಾನವಿ ಹಾಗೂ ಸೂರಜ್ ಅವರು ಕಳೆದ ಅಕ್ಟೋಬರ್ 29ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಪ್ಯಾಲೆಸ್ ಗ್ರೌಂಡ್ನಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಕೂಡ ಆಯೋಜಿಸಲಾಗಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರೂ ಶ್ರೀಲಂಕಾಗೆ ಹನಿಮೂನ್ಗೆ ತೆರಳಿದ್ದರು.
ಆದರೆ ಹನಿಮೂನ್ ವೇಳೆ ದಂಪತಿಯ ನಡುವೆ ಜಗಳ ಉಂಟಾಗಿದ್ದು, ಡಿ.21ರಂದು ಇಬ್ಬರೂ ಶ್ರೀಲಂಕಾದಿಂದ ಭಾರತಕ್ಕೆ ವಾಪಸ್ಸಾಗಿದ್ದಾರೆ. ನಂತರ ಡಿ.22ರಂದು ಗಾನವಿಯನ್ನು ಕುಟುಂಬಸ್ಥರು ಮನೆಗೆ ಕರೆದುಕೊಂಡು ಬಂದಿದ್ದರು.
ಆತ್ಮಹತ್ಯೆ ಯತ್ನ ಮತ್ತು ಚಿಕಿತ್ಸೆ
ಈ ನಡುವೆ ಡಿ.23ರಂದು ಗಾನವಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಮನೆಯವರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಮೆದುಳು ಕಾರ್ಯನಿರ್ವಹಣೆ ಸ್ಥಗಿತವಾಗಿದೆ (ಬ್ರೈನ್ ಡೆಡ್) ಎಂದು ತಿಳಿಸಿ ವೆಂಟಿಲೇಟರ್ನಲ್ಲಿ ಇರಿಸಿದ್ದರು. ಆದರೆ ಡಿ.25ರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಗಾನವಿ ಕೊನೆಯುಸಿರೆಳೆದಿದ್ದಾರೆ.
ಇದನ್ನು ಓದಿ : ಮೈಸೂರು ಅರಮನೆ ಮುಂಭಾಗ ಭಾರೀ ಸ್ಫೋಟ..!
ವರದಕ್ಷಿಣೆ ಕಿರುಕುಳ ಆರೋಪ
ಘಟನೆಯ ಬೆನ್ನಲ್ಲೇ ಗಾನವಿ ಕುಟುಂಬಸ್ಥರು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಸೂರಜ್ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ. ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪವನ್ನು ಮಾಡಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೂರಜ್ ಹಾಗೂ ಕುಟುಂಬಸ್ಥರ ವಿಚಾರಣೆ ನಡೆಸಲಿದ್ದಾರೆ.
ನವವಧುವಿನ ಸಾವಿನಿಂದ ಕುಟುಂಬದಲ್ಲಿ ಶೋಕದ ವಾತಾವರಣ ಆವರಿಸಿದ್ದು, ಪ್ರಕರಣವು ಇದೀಗ ಗಂಭೀರ ತಿರುವು ಪಡೆದುಕೊಂಡಿದೆ. ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ.
ಇದನ್ನು ನೋಡಿ : CAR ಹಾಗೂ BIKE ನಡುವೆ ಭೀಕರ ಅಪಘಾತ- ಬೈಕ್ ಸವಾರ ಚಿಕಿತ್ಸೆ ಫಲಿಸದೇ ಸಾವು




