EGG Rate ಏರಿಕೆಗೆ ಕಂಗೆಟ್ಟ ಸರ್ಕಾರಿ ಶಾಲಾ ಶಿಕ್ಷಕರು..!?

ರಾಜ್ಯದಲ್ಲಿ ಮೊಟ್ಟೆ ಬೆಲೆ ದಿಢೀರನೆ ಹೆಚ್ಚಾಗಿದ್ದು, ಬೆಲೆ ಎಚ್ಚರಿಕೆಯ ಬಿಸಿ ಇದೀಗ ಶಿಕ್ಷಕರಿಗೆ ತಟ್ಟಿದೆ. ಮೊಟ್ಟೆಯನ್ನು ಖರೀದಿಸಿ ಕೊಡುವಷ್ಟು ಹಣವನ್ನು ಸರ್ಕಾರ ನೀಡುತ್ತಿಲ್ಲವಂತೆ. ಇದೇ ಕಾರಣಕ್ಕೆ ಶಿಕ್ಷಕರು ಸ್ವತಃ ತಮ್ಮ ಸಂಬಳದ ದುಡ್ಡಲ್ಲಿಯೇ ಮೊಟ್ಟೆ ಖರೀದಿ ಮಾಡುತ್ತಿದ್ದು, ಅವರ ಸಂಬಳಕ್ಕೆ ಕುತ್ತು ಬರುವಂತಾಗಿದೆ.
ಇನ್ನು ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ಮೊಟ್ಟೆ ನೀಡುವ ಮುಖ್ಯ ಶಿಕ್ಷಕರು ಬೆಲೆ ಏರಿಕೆ ಬವಣೆಗೆ ಸಿಲುಕಿದ್ದಾರೆ. ಚಳಿಗಾಲ ಮತ್ತು ಕ್ರಿಸ್ಮಸ್ ಸೀಸನ್ ಹಿನ್ನೆಲೆಯಲ್ಲಿ EGG Rate ಒಂದಕ್ಕೆ 8 ರೂಪಾಯಿಗೆ ಏರಿರುವುದು ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿದೆ.

ತಮ್ಮ ಸಂಬಳದ ಹಣದಿಂದ ಮೊಟ್ಟೆ ಸರಬರಾಜು
ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ಅಥವಾ ಬಾಳೆಹಣ್ಣು ನೀಡುವುದು ಸರಕಾರದ ಆದೇಶವಾಗಿದೆ. ಇದಕ್ಕಾಗಿ ಸರ್ಕಾರದಿಂದ ಒಂದು ಮೊಟ್ಟೆಗೆ 6ರಂತೆ ಅನುದಾನ ನೀಡಲಾಗುತ್ತದೆ. ಶಾಲಾ ಮಕ್ಕಳ ಅಪೌಷ್ಠಿಕತೆ ನಿವಾರಿಸುವುದು ಬೇಯಿಸಿದ ಮೊಟ್ಟೆ ನೀಡುವುದರ ಹಿಂದಿನ ಉದ್ದೇಶ. ಆದರೆ ಮೊಟ್ಟೆ ಬೆಲೆ ಏರಿಕೆಯನ್ನು ಸರಕಾರ ಗಮನಿಸಿಲ್ಲ.
ಇದನ್ನು ನೋಡಿ : ಹೀರೆಹಳ್ಳಿ ಇಂಡಸ್ಟ್ರೀ ಏರಿಯಾದಲ್ಲೇ ಹದಗೆಟ್ಟ ರಸ್ತೆ- ಜನರ ಗೋಳು ಕೇಳೊರು ಯಾರು..?
ಇದರಿಂದ ಆಯಾ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಸಂಬಳದ ಹಣದಿಂದ ಮೊಟ್ಟೆ ಸರಬರಾಜು ಮಾಡಿ ಬಿಲ್ಲನ್ನು ಸರಿದೂಗಿಸಬೇಕಾಗಿದೆ. ಕೆಲವೊಂದು ಮುಖ್ಯಶಿಕ್ಷಕರು ಹಣವನ್ನು ತಮ್ಮ ಜೇಬಿನಿಂದ ಕೊಡಬೇಕಾಗದ ದುಸ್ಥಿತಿ ಎದುರಾಗಿದೆ.

ಒಂದು ಮೊಟ್ಟೆಗೆ ಏಷು ಬೆಲೆ
ಈ ವರ್ಷದ ಸೆಪ್ಟೆಂಬರ್ ತಿಂಗಳ ಕೊನೆಗೆ ಮೊಟ್ಟೆ ಒಂದಕ್ಕೆ 6.50 ಇದ್ದರೆ, ನವೆಂಬರ್ ಬಳಿಕ ಏರುತ್ತಲೇ ಹೋಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ಒಂದು ಮೊಟ್ಟೆಗೆ 8ಕ್ಕೆ ತಲುಪಿದೆ.ಸರ್ಕಾರದ ಲೆಕ್ಕಾಚಾರದ ಪ್ರಕಾರ ಅನುದಾನ ನೀಡುವ 6 ರೂನಲ್ಲಿ, 5ರೂ ಅನ್ನು ಮಾತ್ರ ಮೊಟ್ಟೆಗೆ ನಿಗದಿಮಾಡಲಾಗಿದ್ದರೆ, ಉಳಿದ 1ರೂಪಾಯಿಯಲ್ಲಿ ಮೊಟ್ಟೆ ಬೇಯಿಸಲು ಗ್ಯಾಸ್, ಮೊಟ್ಟೆಯ ಸಿಪ್ಪೆ ತೆಗೆದವರ ಸಂಬಳ ಮತ್ತು ಸಾಗಾಣಿಕೆಗೆಂದು ನಿಗದಿ ಮಾಡಲಾಗಿದೆ.
ಒಟ್ಟಿನಲ್ಲಿ ವಾರದಲ್ಲಿ ಆರು ದಿನಗಳ ಕಾಲ ಮೊಟ್ಟೆ ನೀಡುವ ಯೋಜನೆಯಿಂದಾಗಿ ಸರ್ಕಾರಿ ಶಾಲೆ ಶಿಕ್ಷಕರಿಗೆ ಸಮಸ್ಯೆ ಎದುರಾಗಿದೆ. ಸರ್ಕಾರ ಈ ಬಗ್ಗೆ ಕೂಡಲೇ ಗಮನಹರಿಸಿ, ಶಾಲಾ ಶಿಕ್ಷಕರಿಗೆ ಆಗುವ ತೊಂದರೆಯನ್ನು ನೀಗಿಸಬೇಕಾಗಿದೆ.
ಇದನ್ನು ಓದಿ : ಚಿತ್ರದುರ್ಗ ಬಸ್ ದುರಂತ – ರಾಜ್ಯ ಸರ್ಕಾರದಿಂದ ಪರಿಹಾರ ಘೋಷಣೆ





