CM ಸ್ಥಾನದಿಂದ ಕೆಳಗಳಿದ ಸಿದ್ದರಾಮಯ್ಯ – ರಾಜ್ಯ ರಾಜಕಾರಣದಲ್ಲಿ ಮಹತ್ವದ ಅಧ್ಯಾಯ ದಾಖಲು.

ಇಡೀ ದೇಶವೇ ಇಂದು ರಾಜ್ಯದತ್ತ ತಿರುಗಿನೋಡುವಂತೆ ಮಾಡಿತ್ತು. ಹೌದು ಕಳೆದ ಕೆಲ ತಿಂಗಳುಗಳಿಂದ ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕಚ್ಚಾಟ ನಡೆಯುತ್ತಿದ್ದು, ಎಲ್ಲಾ ಕಚ್ಚಾಟಗಳಿಗೂ ಇಂದು ಬ್ರೇಕ್ ಬಿದ್ದಿದೆ. ಹೈಕಮಾಂಡ್ ಸೂಚನೆ ಬೆನ್ನಲ್ಲೇ ಇಂದು ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿಕೆಶಿ, ಹಾಗೂ ಅವರ ಆಪ್ತರೊಂದಿಗೆ ಲೋಕಭವನಕ್ಕೆ ತೆರಳಿ ಅಧಿಕೃತವಾಗಿ ರಾಜೀನಾಮೆ ಪತ್ರನ್ನು ಸಲ್ಲಿಸಿದ್ರು. ರಾಜ್ಯಪಾಲರಾದ ಅನುಪಸ್ಥಿತಿಯಲ್ಲಿ ರಾಜಭವನದ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಅವರಿಗೆ ಸಿದ್ದರಾಮಯ್ಯ ಅವರು ರಾಜೀನಾಮೆ ಪತ್ರವನ್ನು ಸಲ್ಲಿಸಿದ್ರು. ಈ ಮೂಲಕ ಸಿದ್ದರಾಮಯ್ಯ ಅವರ ಆಡಳಿತ ಇಂದು ಅಂತ್ಯವಾಗಿದೆ.
ನನ್ನ ರಾಜಕೀಯ ಜೀವನ ಎಂದೆಂದೂ ತೆರೆದ ಪುಸ್ತಕ
ರಾಜಭವನದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬಳಿಕ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ತಮ್ಮ 50 ವರ್ಷದ ರಾಜಕಾರಣವನ್ನು ಸಿದ್ದರಾಮಯ್ಯ ಅವರು ಮೆಲುಕು ಹಾಕಿದ್ರು. ನನ್ನ ರಾಜಕೀಯ ಜೀವನ ಎಂದೆಂದೂ ತೆರೆದ ಪುಸ್ತಕ ಇದ್ದಂತೆ. ರಾಜಕಾರಣದಲ್ಲಿ ಎಂದು ರಾಜಿ ಮಾಡಿಕೊಂಡಿಲ್ಲ, ಮುಂದೆ ಮಾಡುವುದಿಲ್ಲ ಎಂದ ಸಿದ್ದರಾಮಯ್ಯ ತಿಳಿಸಿದ್ರು. ಇನ್ನು ಇದೇ ವೇಳೆ ಡಾ.ರಾಜ್ಕುಮಾರ್ ಅವರನ್ನು ಸಿದ್ದರಾಮಯ್ಯ ಅವರು ನೆನಪು ಮಾಡಿಕೊಂಡಿದ್ದು, ಅಭಿಮಾನಿಗಳು ರಾಜ್ ಕುಮಾರ್ಗೆ ದೇವರಾದ್ರೆ, ನನಗೆ ಮತದಾರರೇ ನನ್ನ ದೇವರು. ಎರಡು ಬಾರಿ ಸಿಎಂ ಆಗಿದ್ದೇನೆ, ಎರಡು ಬಾರಿ ವಿಪಕ್ಷ ನಾಯಕನಾಗಿದ್ದೇನೆ ಈ ಮೂಲಕ ರಾಜ್ಯದ 7 ಕೋಟಿ ಜನರ ಸೇವೆಯನ್ನು ಮಾಡುವ ಅವಕಾಶ ಸಿಕ್ಕಿದೆ ಎಂದು ಹೆಮ್ಮೆ ಪಟ್ಟರು.

ಸಂವಿಧಾನವೇ ನನ್ನ ಧರ್ಮ
ಇನ್ನು ತಾವು ರಾಜಕೀಯಕ್ಕೆ ಬಂದ ಹಾದಿಯನ್ನು ಮೆಲುಕು ಹಾಕಿದ ಸಿದ್ದು, ನಾನು ಸಮಾನ್ಯ ಹಳ್ಳಿಯಿಂದ ಬಂದವನು. ನಾನು ಯಾವತ್ತು ರಾಜಕಾರಣಿ ಆಗ್ತೀನಿ ಅಂತಾ ಕನಸು ಕಂಡಿರಲಿಲ್ಲ, ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿದ್ದೇನೆ. ರಾಜಕಾರಣಕ್ಕೆ ಬಂದ ದಿನದಿಂದ ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ ತತ್ವದಲ್ಲಿ ನಂಬಿಕೆ ಇಟ್ಟುಕೊಂಡವನು. ಸಂವಿಧಾನವೇ ನನ್ನ ಧರ್ಮವೆಂದು ತಮ್ಮ ನಿಲುವನ್ನು ಸಿದ್ದು ಹೇಳಿಕೊಂಡಿದ್ದಾರೆ.
ದಲಿತರ ಪರವಾಗಿ ಕೊನೆಯುಸಿರು ಇರುವವರೆಗೂ ಹೋರಾಟಕ್ಕೆ ಶತ ಸಿದ್ಧ
ಇನ್ನು ನನ್ನ 50 ವರ್ಷದ ರಾಜಕೀಯ ಜೀವನದಲ್ಲಿ ನಾನು ಎಂದಿಗೂ ಅಧಿಕಾರದ ಹಿಂದೆ, ಹಣಕಾಸಿನ ಹಿಂದೆ ಓಡಿದವನು ಅಲ್ಲ. ನೆಲ, ಜಲ ವಿಷಯಕ್ಕೆ ಸಂಬಂಧಿಸಿದಂತೆ ಯಾವತ್ತು ರಾಜೀ ಆಗಿಲ್ಲ. ಅಲ್ದೇ ಶೋಷಿತರ ಪರವಾಗಿ, ದೀನ ದಲಿತರ ಪರವಾಗಿ ಕೊನೆಯುಸಿರು ಇರುವವರೆಗೂ ಹೋರಾಟಕ್ಕೆ ಶತ ಸಿದ್ಧ ಎಂದು ಸಿದ್ದು ಖಡಕ್ ಮಾತನಾಡಿದ್ರು.

ಇದನ್ನು ಓದಿ : “ಅಧಿಕಾರದ ಹಿಂದೆ ಹೋದವನಲ್ಲ, ಆಸ್ತಿ-ಹಣದ ಹಿಂದೆ ಬಿದ್ದಿಲ್ಲ” – Siddaramaiah ನೇರ ನುಡಿ..!!
ನಾನು ರಾಜ್ಯ ರಾಜಕಾರಣದಲ್ಲೇ ಮುಂದುವರೆಯುತ್ತೇನೆ
ಇನ್ನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯಸಭೆಗೆ ಹೋಗಿ ಎಂದು ಹೈಕಮಾಂಡ್ ಹೇಳಿದೆ. ಆದ್ರೆ ನಾನು ಹೋಗಲ್ಲ ಅಂತಾ ಹೇಳಿದ್ದೇನೆ. ನನಗೆ ರಾಷ್ಟ್ರ ರಾಜಕಾರಣದಲ್ಲಿ ಇಷ್ಟ ಇಲ್ಲ, ನಾನು ರಾಜ್ಯ ರಾಜಕಾರಣದಲ್ಲೇ ಮುಂದುವರೆಯುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ರು.
ರಾಜ್ಯದ ಜನರಿಗೆ ಧನ್ಯವಾದ
ಇನ್ನು ಸಿದ್ದರಾಮಯ್ಯ ಅವರು ಇಂದು ರಾಜೀನಾಮೆ ನೀಡಿದ ಕೆಲವೇ ಕ್ಷಣಗಳಲ್ಲಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ರಾಜ್ಯದ ಜನರಿಗೆ ಧನ್ಯವಾದವನ್ನು ತಿಳಿಸಿದ್ದು. ಅಭಿಮಾನಿಗಳು, ಬೆಂಬಲಿಗರ ಕಣ್ಣಲ್ಲಿ ನೀರು ತರಿಸಿರೋದಂತೂ ಸುಳ್ಳಲ್ಲಾ.

ಮುಂದಿನ ಸಿಎಂಗೆ ಅಧಿಕಾರ ವಹಿಸುವ ಬಗ್ಗೆ ಚಿಂತನೆ
ಒಟ್ನಲ್ಲಿ ಭಾಗ್ಯಗಳ ರಾಮಯ್ಯ ಅಂತಾನೇ ಹೆಸರುವಾಸಿಯಾಗಿರೋ ಸಿದ್ದರಾಮಯ್ಯ ಅವರು ಇಂದು ಸಿಎಂ ಸ್ಥಾನದಿಂದ ಕೆಳಗೆ ಇಳಿದಿದ್ದು, ಇಡೀ ದೇಶವೇ ರಾಜ್ಯದತ್ತ ತಿರುಗಿ ನೋಡ್ತಾ ಇದೆ. ಅಲ್ದೇ ಮುಂದಿನ ಸಿಎಂಗೆ ಅಧಿಕಾರ ವಹಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ರಾಜ್ಯಪಾಲರು ವಾಪಸ್ ಬಂದ ಬಳಿಕ ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರ ಆಗಲಿದ್ದು, ಮುಂದೆ ಯಾವ ರೀತಿಯ ರಾಜಕೀಯ ಚಟುವಟಿಕೆಗಳು ನಡೆಯಲಿವೆ ಅನ್ನೋದನ್ನ ಕಾದುನೋಡಬೇಕಿದೆ.

ಇದನ್ನು ನೋಡಿ : ತುಮಕೂರಿನಲ್ಲಿ ಸಂಭ್ರಮದ ಬಕ್ರೀದ್ ಆಚರಣೆ – ಸಾವಿರಾರು ಮಂದಿಯಿಂದ ಸಾಮೂಹಿಕ ಪ್ರಾರ್ಥನೆ

