ಯುಜುವೇಂದ್ರ ಚಹಾಲ್ :
ಚುಟುಕು ಕ್ರಿಕೆಟ್ ನ ಸುಗ್ಗಿ ಅಂತಲೇ ಕರೆಸಿಕೊಳ್ಳೋ ಐಪಿಎಲ್ ಮಹಾ ಸಮರ ದಿನದಿಂದ ದಿನಕ್ಕೇ ಕಾವೇರುತ್ತಲೇ ಇದೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ನಿನ್ನೆ ನಡೆದ ೩೧ ನೇ ಪಂದ್ಯ ಕೂಡ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಇನ್ನೇನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಗೆದ್ದೇಬಿಡ್ತು ಅನ್ನೋ ಅಷ್ಟರಲ್ಲಿ ಪಂಜಾಬ್ ಕಿಂಗ್ಸ್ ತಂಡದ ಯುಜುವೇಂದ್ರ ಚಹಾಲ್ ಫೀಲ್ಡೀಗಿಳಿದು ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿದ್ದಾರೆ, ಈ ಮೂಲಕ ತಾನು ಚುಟುಕು ಕ್ರಿಕೆಟ್ ನ ಅಸಾಧಾರಣ ಸ್ಪಿನ್ನರ್ ಅನ್ನೋದನ್ನು ಚಹಾಲ್ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ನಾಯಕ ಶ್ರೇಯಸ್ ಅಯ್ಯರ್ ಚಹಾಲ್ ಗೆ ೮ನೇ ಓವರ್ ಎಸೆಯಲು ಚಂಡನ್ನು ಕೈಗಿಟ್ಟಾಗ ಅದಾಗಲೇ ಕೋಲ್ಕಾತ್ತಾ ನೈಟ್ ರೈಡರ್ಸ್ ಗೆಲುವಿನ ಹಾದಿಯಲ್ಲಿ ಅರ್ಧ ದೂರ ಕ್ರಮಿಸಿ ಬಿಟ್ಟಿತ್ತು. ಆದರೂ ಕೂಡ ಚಹಾಲ್ ಮ್ಯಾಜಿಕ್ ನಿಂದಾಗಿ ನಿನ್ನೆಯ ರೋಚಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಭರ್ಜರಿ ಗೆಲುವು ದಾಖಲಿಸಿದೆ.
ಮುಲ್ಲನ್ ಪುರ್ ದಲ್ಲಿ ನಡೆದ ನಿನ್ನೆಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದಪಂಜಾಬ್ ಕಿಂಗ್ಸ್ ತಂಡ ೧೫.೩ ಓವರ್ ಗಳಲ್ಲಿ ೧೧೧ ರನ್ ಗಳಿಸಿ ಆಲೌಟ್ ಆಗಿತ್ತು. ಈ ಟಾರ್ಗೆಟ್ ನೋಡಿದ ಬಹುತೇಕರೆಲ್ಲರೂ ಈ ಪಂದ್ಯವನ್ನು ಕೆಕೆಆರ್ ಗೆದ್ದೇಬಿಡ್ತು ಅಂತಲೇ ಅಂದು ಕೊಂಡಿದ್ರು. ಆದರೆ ಅಲ್ಲಿ ಆಗಿದ್ದೆ ಬೇರೆ. ಕನಿಷ್ಟ ರನ್ ಗುರಿಯನ್ನು ಬೆನ್ನತ್ತಿದ್ದ ಕೋಲ್ಕಾತ್ತಾ ನೈಟ್ ರೈಡರ್ಸ್ ತಂಡ ೭ ಓವರ್ ಗಳ ಮುಕ್ತಾಯದ ವೇಳೆ ೨ ವಿಕೆಟ್ ಕಳೆದುಕೊಂಡು ೬೦ ರನ್ ಕಲೆ ಹಾಕಿತ್ತು. ಈ ವೇಳೆ ಫೀಲ್ಡಿಗಿಳಿದ ಯುಜುವೇಂದ್ರ ಚಹಾಲ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಗಳನ್ನು ಪಡೆಯೋ ಮೂಲಕ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿದ್ದು, ಪಂಜಾಬ್ ಕಿಂಗ್ಸ್ ತಂಡದ ಗೆಲುವಿನ ರೂವಾರಿಯಾಗಿ ಬಿಟ್ಟರು.
ಇನ್ನು ಪಂದ್ಯದ ಬಳಿಕ ಚಹಾಲ್ ಕುರಿತು ಇನ್ನೊಂದು ಅಚ್ಚರಿಯ ವಿಚಾರ ಹೊರ ಬಿದ್ದಿದೆ. ಅದೇನಂದರೆ ಚಹಾಲ್ ತೀವ್ರ ಭುಜ ನೋವಿನಿಂದ ಬಳಲುತ್ತಿದ್ದರಂತೆ. ಈ ಬಗ್ಗೆ ಪಂಜಾಬ್ ಕಿಂಗ್ಸ್ ತಂಡದ ಕೋಚ್ ರಿಕ್ಕಿ ಪಾಂಟಿಂಗ್ ಪಂದ್ಯದ ಬಳಿಕ ಹೇಳಿಕೊಂಡಿದ್ದಾರೆ. ಚಹಾಲ್ ಅವರದ್ದು ಅದ್ಭುತ ಪ್ರದರ್ಶನ. ಕಳೆದ ಪಂದ್ಯದಲ್ಲಿ ಅವರಿಗೆ ಭುಜದ ಗಾಯವಾಗಿದ್ದರಿಂದ ಈ ಪಂದ್ಯಕ್ಕೂ ಮುನ್ನ ಫಿಟ್ನೆಸ್ ಪರೀಕ್ಷೆ ಮಾಡಲಾಗಿತ್ತು. ಹೀಗಾಗಿ ಅವರ ಜೊತೆ ನಾನು ಬಹಳ ಚರ್ಚಿಸಿದ್ದೆ. ಅವರು ಹೇಳಿದ್ದೊಂದೇ ಮಾತು. ಕೋಚ್ ನನಗೇನೂ ಸಮಸ್ಯೆಯಿಲ್ಲ ಅಂತಾ ಹೇಳಿದ್ದರು. ಅದೇ ರೀತಿ ಪ್ರದರ್ಶನ ನೀಡಿದ್ದಾರೆ. ಅಂತಾ ಚಹಾಲ್ ಬಗ್ಗೆ ಪಾಂಟಿಂಗ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇನ್ನು ನಿನ್ನೆಯ ಪಂದ್ಯದಲ್ಲಿ ೪ ವಿಕೆಟ್ ಕಬಳಿಸಿದ ಚಹಾಲ್ ಸುನಿಲ್ ನರೈನ್ ಅವರ ೨ ಐಪಿಎಲ್ ದಾಖಲೆಯನ್ನು ಕೂಡ ಸರಿಗಟ್ಟಿದ್ದಾರೆ.