ಉಡುಪಿ:
ಇತ್ತೀಚೆಗೆ ಹಲವು ಪ್ರದೇಶಗಳಲ್ಲಿ ಅಗ್ನಿ ಅನಾಹುತಗಳು ಸಂಭವಿಸುತ್ತಲೇ ಇದ್ದು, ಇದೀಗ ಮತ್ತೊಂದು ಬೆಂಕಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಗೆಗೆ ಕಸ ಸಂಗ್ರಹದ ಎರಡು ವಾಹನಗಳು ಸುಟ್ಟು ಹೋಗಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮವಾರದ ವಾರಂಬಳ್ಳಿ ಪಂಚಾಯತಿಗೆ ಸೇರಿದ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಶನಿವಾರ ಮುಂಜಾನೆ ನಡೆದಿದೆ.
ವಾರಂಬಳ್ಳಿ ಪಂಚಾಯ್ತಿಗೆ ಸೇರಿದ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಇಂದು ಮುಂಜಾನೆ ಬೆಂಕಿ ಅವಘಡ ಸಂಭವಿಸಿ ಎರಡು ಕಸದ ವಾಹನಗಳು ಬೆಂಕಿಗಾಹುತಿಯಾಗಿದ್ದು, ಯಂತ್ರೋಪಕರಣಗಳು ಹಾಗೂ ಉಪಕರಣಗಳು ಸುಟ್ಟುಹೋಗಿವೆ. ಹಾಗೂ ಇದರ ಪಕ್ಕದಲ್ಲಿದ್ದ ಎರಡು ಅಂಗಡಿಗಳಿಗೂ ಸಹ ಬೆಂಕಿ ತಗುಲಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಮಲ್ಪೆ, ಕುಂದಾಪುರ ಮತ್ತು ಉಡುಪಿಯ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿರುವ ಸಾಧ್ಯತೆಯಿದೆ.
ಬೆಂಕಿ ಅನಾಹುತದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಬ್ರಹ್ಮಾವರ ಠಾಣೆಯ ಪೊಲೀಸರು ಸ್ಥಳಕ್ಕಾಗಿಮಿಸಿ ಸಿಸಿಟಿವಿಯ ಡಿವಿಆರ್ ವಶಪಡಿಸಿಕೊಂಡಿದ್ದು, ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.