Tumakuru : ನಾಪತ್ತೆಯಾಗಿದ್ದ ಉತ್ತರ ಪ್ರದೇಶ ಮೂಲದ ಅಪ್ರಾಪ್ತ ಬಾಲಕಿಯ ರಕ್ಷಣೆ

TUMAKURU: ಉತ್ತರ ಪ್ರದೇಶ ಮೂಲದ ನಾಪತ್ತೆಯಾದ ಬಾಲಕಿಯೊಬ್ಬಳು ತುಮಕೂರಿನಲ್ಲಿ ಪತ್ತೆಯಾಗಿದ್ದು, ಕ್ಯಾತ್ಸಂದ್ರ ಠಾಣಾ ಪೊಲೀಸ್ ಇಲಾಖೆ ಯಶಸ್ವಿಯಾಗಿ ಆಕೆಯ ರಕ್ಷಣೆ ಮಾಡಿ ಬಾಲಕಿಯರ ಮಂದಿರಕ್ಕೆ ಬಿಟ್ಟಿರುವಂತ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಜೊತೆಗಿದ್ದ 25 ವರ್ಷದ ಶಾನವಾಜ್ ಎಂಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉತ್ತರ ಪ್ರದೇಶದ ಮಾಲ್ವಾ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿ, ನಾಪತ್ತೆಯಾದ ಬಾಲಕಿಗಾಗಿ ಹುಡುಕಾಟ ಆರಂಭಿಸಲಾಗಿತ್ತು. ನಂತರ, ಉತ್ತರ ಪ್ರದೇಶದ ಪೊಲೀಸರು ನೀಡಿದ ಖಚಿತ ಮಾಹಿತಿ ಮೇರೆಗೆ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಸಿಬ್ಬಂದಿ ಕ್ರಮ ಕೈಗೊಂಡು, ಬಾಲಕಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಈ ವೇಳೆ ಬಾಲಕಿಯೊಂದಿಗೆ ಇದ್ದ ಶಾನವಾಜ್ ಎಂಬ 25 ವರ್ಷದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಾಲಕಿಯನ್ನು ಪ್ರಾಥಮಿಕ ವಿಚಾರಣೆಗೆ ಒಳಪಡಿಸಲಾಗಿದ್ದು, ಆಕೆ ತನ್ನ ಒಪ್ಪಿಗೆಯೊಂದಿಗೆ ಯುವಕನೊಂದಿಗೆ ಬಂದಿದ್ದೆನೆ ಎಂದು ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯನ್ನು ಸ್ಥಳೀಯ ಬಾಲ ಮಂದಿರಕ್ಕೆ ಸ್ಥಳಾಂತರ ಮಾಡಲಾಗಿದೆ. ಆಕೆ ಸುರಕ್ಷಿತವಾಗಿದ್ದು, ತುಮಕೂರು ಪೊಲೀಸರು ಬಾಲಕಿ ಮತ್ತು ಶಾನವಾಜ್ ಎಂಬ ಯುವಕನನ್ನು ಶೀಘ್ರದಲ್ಲೇ ಉತ್ತರ ಪ್ರದೇಶದ ಪೊಲೀಸರಿಗೆ ಹಸ್ತಾಂತರಿಸಲಿದೆ ಎಂಬ ಮಾಹಿತಿಯನ್ನು ಕ್ಯಾತ್ಸಂದ್ರ ಠಾಣೆಯ ಅಧಿಕಾರಿಗಳು ನೀಡಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews