ಗದಗ:
ಗದಗ ಜಿಲ್ಲೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಯಿಂದ ಮಹಿಳೆಗೆ ಗಂಭೀರ ಗಾಯವಾದ ಘಟನೆ ನಡೆದಿದೆ. 45 ವರ್ಷದ ಜನ್ನತಬೀ ಎಂಬುವವರು ಗಾಯಗೊಂಡ ಮಹಿಳೆಯಾಗಿದ್ದಾರೆ.
ಇನ್ನು ಗಾಡಗೋಳಿ ಗ್ರಾಮದ ಹೊಳೆ ಆಲೂರ ರಸ್ತೆಯಲ್ಲಿ ನಾಯಿಗಳ ಕಾದಾಟ ನಡೆದಿತ್ತು. ಅದೇ ಸಂದರ್ಭದಲ್ಲಿ ಜನ್ನತಬೀ ಅವರು ಮನೆಯಿಂದ ಅಂಗಡಿಗೆ ನಡೆದುಕೊಂಡು ಹೋಗುತ್ತಿದ್ದರು. ಶ್ವಾನಗಳ ಗುಂಪು ಕಾದಾಡಿಕೊಂಡು ಬಂದು ಏಕಾಏಕಿ ಮಹಿಳೆಯ ಮೇಲೆ ಎರಗಿವೆ. ಈ ಪರಿಣಾಮ ಮಹಿಳೆ ಕೆಳಗೆ ಬಿದ್ದು, ತಲೆಗೆ ಗಂಭೀರ ಗಾಯಗಳಾಗಿದ್ದು, ಮಹಿಳೆ ಕೆಳಗೆ ಬಿದ್ದ ಕೂಡಲೇ ನಾಯಿಗಳು ಎಲ್ಲೆಂದರಲ್ಲಿ ಕಚ್ಚಿವೆ. ಮಹಿಳೆ ರಂಜಾನ್ ಹಬ್ಬಕ್ಕೆಂದು ಬೆಂಗಳೂರಿನಿಂದ ತವರೂರು ಗಾಡಗೋಳಿಗೆ ಆಗಮಿಸಿದ್ದರು.
ಇನ್ನು ಗಾಯಾಳನ್ನು ರೋಣ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣ ರೋಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಒತ್ತಾಯಿಸಿದ್ದಾರೆ.