ಪಂಚಶೀಲ ಪಾದಯಾತ್ರೆತುಮಕೂರು
ತುಮಕೂರು : ಬೌದ್ಧ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಬೌದ್ಧ ಧರ್ಮೀಯರು ಗುಲ್ಬರ್ಗಾದಿಂದ ಬೆಂಗಳೂರಿನ ವಿಧಾನಸೌಧಕ್ಕೆ ಪಾದಯಾತ್ರೆಯನ್ನ ಕೈಗೊಂಡಿದ್ದು, ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ತಾಲೂಕಿನ ಬೌದ್ಧ ಧರ್ಮದ ಸನ್ನತಿಯ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ ಮತ್ತು ಬೌದ್ಧ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ, ಹಾಗೂ ಬೌದ್ಧ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ ಒತ್ತಾಯಿಸಿ ಪಾದಯಾತ್ರೆ ಕೈಗೊಳ್ಳಲಾಗಿದೆ. ನವೆಂಬರ್ 15ರಿಂದ ಸನ್ನತಿಯಿಂದ ಬೆಂಗಳೂರುವರೆಗೆ ಸುಮಾರು 800 ಕಿಲೋಮೀಟರ್ ದೂರ ಕ್ರಮಿಸುವ ಪಂಚಶೀಲ ಪಾದಯಾತ್ರೆ ನಡೆಯುತ್ತಿದ್ದು, ನಿನ್ನೆ ಈ ಪಾದಯಾತ್ರೆ ತುಮಕೂರಿಗೆ ಆಗಮಿಸಿದ್ದು ತುಮಕೂರಿನ ಸಾರ್ವಜನಿಕರು ಪುಷ್ಪಾರ್ಚನೆ ಸಲ್ಲಿಸಿ ಸ್ವಾಗತಿಸಿದರು.
ಈ ವೇಳೆ ಬೌದ್ಧ ಧರ್ಮ ಪ್ರಚಾರಕ ಬೋಧಿದತ್ತ ಥೇರೊ ಭಂತೇಜಿ ಮಾತನಾಡಿ, ಪಾದಯಾತ್ರೆಯುದ್ದಕ್ಕೂ ಬುದ್ಧ ಧರ್ಮದ ಬಗ್ಗೆ ಜಾಗೃತಿ ನಡೆಯಲಿದೆ. ಭಗವಾನ್ ಬುದ್ಧರ ಅಸ್ತಿ ಕಲಶ, ಬುದ್ಧ, ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಯ ಟ್ಯಾಬ್ಲೋ ಪೂಜೆ, ಸನ್ನತಿ ಅಭಿವೃದ್ಧಿ ನಿಗಮ ಸ್ಥಾಪನೆ, ಅಶೋಕ ಸನ್ನತಿ ಉತ್ಸವ ಆರಂಭ, ಸನ್ನತಿ ಅಭಿವೃದ್ಧಿಗೆ ಸಾವಿರ ಕೋಟಿ ರೂ. ಬಿಡುಗಡೆ, ಬುದ್ದ ಪೂರ್ಣಿಮೆ ದಿನ ರಜೆ ಘೋಷಣೆ, ಸನ್ನತಿ ಶಿಲಾಶಾಸನಗಳ ರಕ್ಷಣೆ ಹೀಗೆ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದೇವೆ. ಜನವರಿ 24ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂಗೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಪಾದಯಾತ್ರೆಯಲ್ಲಿ ಕರ್ನಾಟಕ ಬಿಕ್ಕು ಹಾಗೂ ಬಿಕ್ಕುಣಿ ಸಂಘ, ಸನ್ನತಿ ಪಂಚಶೀಲ ಪಾದಯಾತ್ರೆ ಸಂಘಟನಾ ಸಮಿತಿ, ರಾಜ್ಯದ ಸಮಸ್ತ ದಲಿತ ಸಂಘಟನೆಗಳ ಮುಖಂಡರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.