ನಟ ಸೈಫ್ ಅಲಿ ಖಾನ್ಹಿಂದಿ
ಮುಂಬೈ: ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಮಹಾರಾಷ್ಟ್ರದ ಬಾಂದ್ರಾದಲ್ಲಿರೋ ನಟ ಸೈಫ್ ಅಲಿ ಖಾನ್ ಮನೆಗೆ ಮನೆಗಳ್ಳತನಕ್ಕೆ ಬಂದಿದ್ದ ದುಷ್ಕರ್ಮಿಯೊಬ್ಬ ಹಲ್ಲೆ ಮಾಡಿರುವ ಬಗ್ಗೆ ವರದಿಯಾಗಿದೆ. ಚಾಕು ಇರಿತಕ್ಕೆ ಒಳಗಾದ ಸೈಫ್ ಅಲಿ ಖಾನ್ ಅವರನ್ನು ಬಾಂಧ್ರಾದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿ ಪ್ರಕಾರ, ಮಧ್ಯರಾತ್ರಿ 2.30 ಸುಮಾರಿಗೆ ಸೈಫ್ ಅಲಿಖಾನ್ ಅವರ ಮನೆಗೆ ದರೋಡೆಕೋರ ನುಗ್ಗಿದ್ದಾನೆ. ಈ ವೇಳೆ ದರೋಡೆಕೋರನಿಗೆ ಪ್ರತಿರೋಧ ತೋರುವಾಗ ಸೈಫ್ ಅಲಿ ಖಾನ್ ಮೇಲೆ ಹಲವು ಬಾರಿ ಚಾಕುವಿನಿಂದ ಹಲ್ಲೆ ಮಾಡಿ ಬಳಿಕ ಮನೆಯವರು ಎಚ್ಚರಗೊಳ್ಳುತ್ತಿದ್ದಂತೆ ಪರಾರಿಯಾಗಿದ್ದಾನೆ. ಹಲ್ಲೆಗೊಳಗಾದ ಸೈಫ್ ಅಲಿ ಖಾನ್ ಗಂಭೀರ ಗಾಯಗೊಂಡಿದ್ದು, ಹೆಚ್ಚು ರಕ್ತಸ್ರಾವ ಆಗಿರುವ ಹಿನ್ನೆಲೆ ಕೂಡಲೇ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡೂವರೆ ಗಂಟೆಗಳ ಕಾಲ ನಟನಿಗೆ ಆಪರೇಷನ್ ನಡೆದಿದೆ.
ಈ ದಾಳಿಯಲ್ಲಿ ಸೈಫ್ ಅವರ ಕೈ ಕುತ್ತಿಗೆ ಹಾಗೂ ಬೆನ್ನು ಮೂಳೆ ಸೇರಿದಂತೆ ಆರು ಕಡೆ ಗಾಯಗಳಾಗಿದ್ದು ,ಸದ್ಯ ಶಸ್ತ್ರ ಚಿಕಿತ್ಸಕರ ತಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದೆ, ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಲೀಲಾವತಿ ಆಸ್ಪತ್ರೆಯ ಸಿಒಒ ಡಾ.ನೀರಜ್ ಉತ್ತಮನಿ ರವರು ಮಾತನಾಡಿ, ನರಶಸ್ತ್ರ ಚಿಕಿತ್ಸಕ ಡಾ. ನಿತಿನ್, ಕಾಸ್ಮೆಟಿಕ್ ಸರ್ಜನ್ ಡಾ. ಲೀಲಾ ಜೈನ್, ಅರವಳಿಕೆ ತಜ್ಞೆ ಡಾ.ನಿಶಾ ಗಾಂಧಿ ನೇತೃತ್ವದ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಾಂದ್ರಾ ಪೊಲೀಸರು ಭೇಟಿ ನೀಡಿ ಅಪರಿಚಿತ ವ್ಯಕ್ತಿಯ ವಿರುಧ್ದ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮುಂಬೈ ಕ್ರೈಂ ಬ್ರಾಂಚ್ ಕೂಡ ತನಿಖೆಗೆ ಕೈ ಜೋಡಿಸಿದ್ದಾರೆ.