ಶಿವಮೊಗ್ಗ : ದ್ವಿಚಕ್ರ ವಾಹನ ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಮೂರು ವರ್ಷದ ಮಗು ಹಾಗೂ ಮಗುವಿನ ತಾಯಿ ಜೀವ ಬಿಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಕೋಣೆ ಹೊಸೂರು- ತುಪ್ಪೂರು ಬಳಿ ನಡೆದಿದೆ.
ಅಪಘಾತದಲ್ಲಿ ಅಸ್ಮಾಭಾನು (30) ಹಾಗೂ 3 ವರ್ಷದ ಮಗು ಮೊಹ್ಮದ್ ಖಬೀರ್ ಸಾವು. ಘಟನೆಯಲ್ಲಿ ಮಹಿಳೆಯ ಗಂಡ ಖಲಂದರ್ ಪಾಶ ಹಾಗೂ ಇನ್ನೊಂದು ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತರೀಕೆರೆಯ ಬುಕ್ಕಾಂಬುದಿಯಿಂದ ಸಾಗರಕ್ಕೆ ಇವರು ದ್ವಿಚಕ್ರ ವಾಹನದಲ್ಲಿ ತೆರಳುವಾಗ ಮಳೆ ಬಂದ ಕಾರಣದಿಂದ ಬೈಕ್ ನಿಲ್ಲಿಸಲು ಯತ್ನಿಸುತ್ತಿದ್ದ ವೇಳೆ, ಹಿಂದಿನಿಂದ ವೇಗವಾಗಿ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಇನ್ನು ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಮೂರು ವರ್ಷದ ಮಗು ಮೊಹ್ಮದ್ ಖಬೀರ್ ಸಾವನ್ನಪ್ಪಿದೆ. ಈ ವೇಳೆ ಮಗುವಿನ ತಾಯಿ, ತಂದೆ ಹಾಗೂ ಇನ್ನೊಂದು 6 ವರ್ಷದ ಮಗುವಿಗೆ ಗಂಭೀರವಾದ ಗಾಯಗಳು ಆಗಿದ್ದವು. ತಕ್ಷಣ ಗಾಯಾಳುಗಳನ್ನು ಆನಂದಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು. ಆದರೆ ಮಾರ್ಗಮಧ್ಯೆಯೇ ತಾಯಿ ಅಸ್ಮಭಾನು ನಿಧನರಾದರು. ಮಗು ಮತ್ತು ತಂದೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಕುರಿತಾಗಿ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.