ಬೆಂಗಳೂರು :
ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಯಿಂದ ಪರಾರಿಯಾಗಿದ್ದ ವಿಚರಣಾಧೀನ ಕೈಧಿಯನ್ನು ತುಮಕೂರಿನಲ್ಲಿ ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ಕೈದಿ ಚಂದ್ರಶೇಖರ್ ಎಂಬಾತ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಸೆಂಟರ್ ನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದನು.
ಡಕಾಯಿತಿ ಪ್ರಕರಣದಲ್ಲಿ ಎರಡು ವರ್ಷಗಳಿಂದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ವಿಚಾರಣಾ ಕೈದಿಯಾಗಿದ್ದ ಈತ ಎದೆನೋವು ವಾಂತಿ ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಟ್ರಾಮಾ ಸೆಂಟರ್ ನಿಂದ ಈತ ತಪ್ಪಿಸಿಕೊಂಡು ಹೋಗಿದ್ದನು, ಈ ಘಟನೆ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಕೈದಿ ಹುಡುಕಾಟದಲ್ಲಿದ್ದ ಪೊಲೀಸರಿಗೆ ನಿನ್ನೆ ರಾತ್ರಿ 8.20 ರ ಸುಮಾರಿಗೆ ತುಮಕೂರು ಬಸ್ ನಿಲ್ದಾಣದಲ್ಲಿ ಸಿಕ್ಕಿ ಬಿದ್ದಿದ್ದಾನೆ.
ವಿವಿ ಪುರಂ ಹಾಗೂ ಜೈಲು ಪೊಲೀಸರು ಕೈದಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದು, ತುಮಕೂರಿನಿಂದ ಬೆಂಗಳೂರಿಗೆ ಕರೆತಂದು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಕೈದಿ ಚಂದ್ರಶೇಖರ್ ನನ್ನು ಇರಿಸಲಾಗಿದೆ.