ಪಾವಗಡ:
ಪ್ರಖ್ಯಾತ ವೈದ್ಯ, ಬ್ರಿಟಿಷ್ ರಾಣಿ ಎಲಿಜಬೆತ್ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ಪಡೆದ ಡಾ. ಆರ್.ಎಸ್. ಸೂರ್ಯನಾರಾಯಣ ಶೆಟ್ಟಿ ಅವರು ಪಾವಗಡದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಹಾಗೂ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿದರು. ಈ ವೇಳೆ ಆರ್.ಎಸ್ ಶೆಟ್ಟಿವರಿಗೆ ಜಪಾನಂದ ಶ್ರೀಗಳು ಸಾಥ್ ನೀಡಿದರು. ಬಳಿಕ ಆಸ್ಪತ್ರೆಯ ಹಿರಿಯ ತಜ್ಞರೊಂದಿಗೆ ಚರ್ಚಿಸಿ, ಬಡ ರೋಗಿಗಳೊಂದಿಗೆ ಮಾತುಕತೆ ನಡೆಸಿದರು. ಅಲ್ಲದೆ, ಮಧ್ಯಾಹ್ನ ತಮ್ಮ ಧರ್ಮಪತ್ನಿ ಶ್ರೀಮತಿ ಚಂದ್ರಾ ಶೆಟ್ಟಿಯವರೊಂದಿಗೆ ರೋಗಿಗಳಿಗೆ ಊಟ ವಿತರಿಸಿದರು.
ಸುಮಾರು ಮೂವತ್ತು ವರ್ಷಗಳಿಂದ ರೋಟರಿ ಕ್ಲಬ್, ಓಲ್ಡ್ ಹ್ಯಾಂನ ಪ್ರತಿನಿಧಿಯಾಗಿ ಈ ಆಸ್ಪತ್ರೆಗಳಿಗೆ ನಿರಂತರ ಸಹಾಯ ಮಾಡುತ್ತಿರುವ R.S ಶೆಟ್ಟಿ ಅವರು, ಈ ಬಾರಿ ಆಸ್ಪತ್ರೆಯನ್ನು ಭೇಟಿ ಮಾಡುವ ವೇಳೆ ಆಸ್ಪತ್ರೆಯಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಈ ವೇಳೆ ಬಿಡುವಿಲ್ಲದ ವೈದ್ಯಕೀಯ ಸೇವೆ ನೀಡುತ್ತಿರುವ ಈ ಸಂಸ್ಥೆಗಳ ಕಾರ್ಯಪದ್ಧತಿ ಇಂಗ್ಲೆಂಡಿನಲ್ಲಿಯೂ ಕಂಡುಬರುವುದಿಲ್ಲ ಎಂಬುದಾಗಿ ಅವರು ಶ್ಲಾಘಿಸಿದರು. ಇನ್ನು ಸ್ವಾಮೀಜಿಯವರೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿಯೂ ಭಾಗಿಯಾಗಿರುವ ಡಾ. ಶೆಟ್ಟಿ, ಇಂಗ್ಲೆಂಡಿನ ಕನ್ನಡ ಸಂಘಟನೆಗಳಲ್ಲಿ ಅವರ ಉಪನ್ಯಾಸಗಳು, ದಾಸರ ಪದಗಳು, ವಚನಗಳು, ಜನಪದ ಗೀತೆಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಪಾವಗಡದ ಸಂಸ್ಥೆಗಳ ಸೇವಾ ಕಾರ್ಯ ಮುಂದುವರಿಯಲಿ ಎಂದು ಅವರು ಹೃತ್ಪೂರ್ವಕವಾಗಿ ಹಾರೈಸಿದರು.