ಕೇಂದ್ರ ಸಚಿವ ವಿ.ಸೋಮಣ್ಣತುಮಕೂರು
ತುಮಕೂರು ಲೋಕಸಭಾ ಕ್ಷೇತ್ರದಿಂದ ಭರ್ಜರಿಯಾಗಿ ಗೆಲುವು ಸಾಧಿಸಿ ಕೇಂದ್ರದಲ್ಲಿ ಪ್ರತಿಷ್ಠಿತ ರೈಲ್ವೇ ಇಲಾಖೆ ಮತ್ತು ಜಲಶಕ್ತಿ ಇಲಾಖೆಯ ರಾಜ್ಯಖಾತೆ ಸಚಿವ ವಿ.ಸೋಮಣ್ಣ ಕೇಂದ್ರ ಸಚಿವರಾದ ಬಳಿಕ ತುಮಕೂರಿಗೆ ಹಲವು ಕೊಡುಗೆಗಳನ್ನ ನೀಡುತ್ತಿದ್ದು ಸಮಯ ಸಿಕ್ಕಾಗಲೆಲ್ಲಾ ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದು ಎರಡು ದಿನಗಳ ಕಾಲ ತುಮಕೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಇಂದು ತುಮಕೂರು ತಾಲೂಕಿನಲ್ಲಿ ಸಂಚಾರ ನಡೆಸುತ್ತಿರುವ ವಿ.ಸೋಮಣ್ಣ ತುಮಕೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಗೂಳೂರಿನಲ್ಲಿ ಜನಸ್ಪಂದನ ಸಭೆ ನಡೆಸಿದರು. ಕೇಂದ್ರ ಸಚಿವರು ಬರುವ ವಿಷಯ ತಿಳಿದು ನೂರಾರು ಸಾರ್ವಜನಿಕರು ತಮ್ಮ ಅಹವಾಲುಗಳನ್ನು ನೀಡುವ ಸಲುವಾಗಿ ಬಂದಿದ್ದರು. ಸಚಿವರು ಜನರಿಂದ ಅಹವಾಲನ್ನು ಸ್ವೀಕರಿಸಿ, ಆದಷ್ಟು ಶೀಘ್ರದಲ್ಲಿ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದರು. ಜೊತೆಗೆ ಕಾರ್ಯಕ್ರಮದಲ್ಲಿ ವಿಕಲ ಚೇತನರಿಗೆ ಸರ್ಕಾರದಿಂದ ನೀಡುವ ತ್ರಿಚಕ್ರವಾಹನಗಳನ್ನು ಕೂಡ ವಿತರಿಸಿದರು.
ಬಳಿಕ ಮಾತನಾಡಿದ ಸಚಿವ ವಿ.ಸೋಮಣ್ಣ ಕೇಂದ್ರ ಸಚಿವನಾಗಿ ತುಮಕೂರಿಗೆ ಮೇಮೋ ರೈಲು ತರಿಸಿರುವೆ. ವಂದೇ ಭಾರತ್ ರೈಲು ನಿಲುಗಡೆ ವ್ಯವಸ್ತೆಯಾಗಿದೆ. ರೈಲ್ವೇ ಇಲಾಖೆಯಿಂದ ನೂರಾರು ಕೋಟಿ ಅನುದಾನವನ್ನು ತುಮಕೂರಿಗೆ ಕೊಡಿಸಿದ್ದೇನೆ ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೂ ಕುಡಿಯುವ ನೀರನ್ನ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿರುವೆ. ಈ ಭಾಗದ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಏನೆಲ್ಲಾ ಸೌಲಭ್ಯಗಳು ಬೇಕೋ ಅದನ್ನ ನಾನು ಮತ್ತು ಶಾಸಕ ಸುರೇಶ್ ಗೌಡ್ರು ಸೇರಿ ಮಾಡಿಸುತ್ತೇವೆ. ಗುಬ್ಬಿಯಿಂದ ಸಿದ್ದಗಂಗಾ ಮಠದವರೆಗೆ ನಾಲ್ಕು ಪಥದ ಹೆದ್ದಾರಿ ಆಗುತ್ತದೆ. ಈ ರಸ್ತೆಯಲ್ಲಿ ಯಾರಾದರೂ ಹೋಗುತ್ತಿದ್ದರೆ ಇದು ಸೋಮಣ್ಣ ಕ್ಷೇತ್ರ ಅಂತಾ ಗೊತ್ತಾಗಬೇಕು ಆ ರೀತಿ ಮಾದರಿ ಕ್ಷೇತ್ರವನ್ನಾಗಿ ಆಬಿವೃದ್ಧಿಪಡಿಸುತ್ತೆನೆ ಎಂದು ಭರವಸೆ ನೀಡಿದರು.
ಕೇಂದ್ರ ಸಚಿವ ವಿ.ಸೋಮಣ್ಣಗೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡ, ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ಸೇರಿದಂತೆ ಹಲವರು ಸಾಥ್ ನೀಡಿದ್ರು. ಜನಸ್ಪಂದನಾ ಸಭೆಯಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.