ಮಧುಗಿರಿ : ಪ್ರಜಾಶಕ್ತಿ ಸುದ್ದಿ ಬೆನ್ನಲ್ಲೇ ದಲಿತರಿಗೆ ಪೂಜೆಗೆ ಅವಕಾಶ ಕಲ್ಪಿಸಿದ ತಾಲೂಕು ಆಡಳಿತ..!

ಮಧುಗಿರಿ :

ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇಡೀ ಸಮಾಜವೇ ತಲೆ ತಗ್ಗಿಸುವಂತಹ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿತ್ತು. ದಲಿತ ಅನ್ನೋ ಕಾರಣಕ್ಕೆ ಪೂಜೆ ಮಾಡಲು ದೇವಸ್ಥಾನಕ್ಕೆ ಹೋಗಿದ್ದ ಯುವಕನನ್ನು ಹೊರದಬ್ಬಿದ್ದ ಕೆಲವು ಸವರ್ಣೀಯರು ಆತನಿಗೆ ಧಮ್ಕಿ ಹಾಕುವ ಕೆಲಸ ಮಾಡಿದ್ದರು. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಕವಣದಾಲ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ವರದಿಯನ್ನು ಬಿತ್ತರಿಸುತ್ತಿದ್ದಂತೆ ಎಚ್ಚೆತ್ತ ತಾಲೂಕು ಆಡಳಿತ, ತಕ್ಷಣವೇ ಗ್ರಾಮಕ್ಕೆ ದೌಡಾಯಿಸಿ, ಸಭೆ ನಡೆಸಿ ದಲಿತ ಯುವಕನಿಗೆ ದೇವಸ್ಥಾನದಲ್ಲಿ ಪೂಜೆಗೆ ಅವಕಾಶ ಕಲ್ಪಿಸಿದೆ.

ಕವಣದಾಲ ಗ್ರಾಮದ ಶ್ರೀ ರಾಮಾಂಜನೇಯಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋಗಿದ್ದ ದಲಿತ ಯುವಕ ಸ್ವಾಮಿನಾಥ ಎಂಬಾತನನ್ನು ಆ ಗ್ರಾಮದ ಕೆಲ ಸರ್ವಣೀಯರು ದೇವಸ್ಥಾನದಿಂದ ಆಚೆ ಹೋಗು ಎಂದು ಕರೆದುಕೊಂಡು ಹೋಗಿ, ದಲಿತರು ದೇವಸ್ಥಾನದ ಒಳಗೆ ಹೋಗಬಾರದು ಅಂತಾ ಧಮ್ಕಿ ಹಾಕಿದ್ದರು. ಈ ಬಗ್ಗೆ ಸುದ್ದಿ ಮಾಡಿದ್ದ ಪ್ರಜಾಶಕ್ತಿ ಟಿವಿ ಸಂಬಂಧಪಟ್ಟವರ ಗಮನ ಸೆಳೆಯುವ ಕೆಲಸ ಮಾಡಿತ್ತು. ಸುದ್ದಿಯಾಗ್ತಿದ್ದಂತೆ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ದಲಿತರಿಗೆ ದೇವಸ್ಥಾನಗಳಲ್ಲಿ ಮುಕ್ತವಾಗಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿದ್ದಾರೆ. ಇನ್ನು ಈ ಸಭೆಯಲ್ಲಿ ಸಂವಿಧಾನ ಬದ್ಧವಾಗಿ ನಾನು ನನ್ನ ಹಕ್ಕನ್ನು ಕೇಳಿದ್ದೇನೆ. ಆದರೆ ನನಗೆ ಸವರ್ಣಿಯರಿಂದ ಪ್ರಾಣ ಬೆದರಿಕೆ ಇದೆ. ನನಗೆ ಸೂಕ್ತ ರಕ್ಷಣೆಯನ್ನು ನೀಡಬೇಕು ಅಂತಾ ದಲಿತ ಯುವಕ ಸ್ವಾಮಿನಾಥ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾನೆ.

ಇನ್ನು ಈ ಸಭೆಯಲ್ಲಿ ಮಧುಗಿರಿ ಡಿವೈಎಸ್ಪಿ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್ ಬಿ.ಎಂ, ಸಿಪಿಐ ಹನುಮಂತರಾಯಪ್ಪ, ಪಿಎಸೈ ಗುರುನಾಥ್ ಸೇರಿ ಅನೇಕ ಅಧಿಕಾರಿಗಳು, ಗ್ರಾಮದ ಮುಖಂಡರು ಹಾಜರಿದ್ದರು. ಇನ್ನು ಈ ಬಗ್ಗೆ ಮಾತನಾಡಿರುವ ಮಧುಗಿರಿ ತಹಶೀಲ್ದಾರ್‌ ಅವರು, ಸಂವಿಧಾನದ ಅಡಿಯಲ್ಲಿ ಎಲ್ಲರಿಗೂ ಸಮಾನತೆ ನೀಡಿದ್ದು, ಲಿಂಗ ಜಾತಿ, ವರ್ಣ ಎಂಬ ಬೇಧಭಾವವಿಲ್ಲದೆ ಎಲ್ಲರಿಗೂ ಪೂಜೆ ಸಲ್ಲಿಸಲು ಅವಕಾಶವಿದೆ. ಗ್ರಾಮದ ಎಲ್ಲಾ ದೇವಾಲಯಗಳಲ್ಲಿ ಸರ್ವರಿಗೂ ಪೂಜೆ ಮಾಡುವ ಮುಕ್ತ ಅವಕಾಶವಿದ್ದು ಮುಂದಿನ ದಿನಗಳಲ್ಲಿ ಇಂತಹ ಘಟನೆ ಜರುಗದಂತೆ ಎಚ್ಚರವಹಿಸಬೇಕು. ಇಂತಹ ಘಟನೆ ಮರುಕಳಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತಾ ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಇಂದಿಗೂ ಈ ಅಸ್ಪ್ರಶ್ಯತೆ ಅನ್ನೋ ಪಿಡುಗು ಹಾಗೆಯೇ ಆಚರಣೆಯಲ್ಲಿರುವುದು ವಿಪರ್ಯಾಸವೇ ಸರಿ. ಮನುಷ್ಯರನ್ನು ಮನುಷ್ಯರನ್ನಾಗಿ ನೋಡ್ತಿಲ್ಲಾ ಅನ್ನೋದು ಬೇಸರದ ಸಂಗತಿಯಾಗಿದೆ.

Author:

...
Sushmitha N

Copy Editor

prajashakthi tv

share
No Reviews