ಕೊರಟಗೆರೆ:
ಇಂದಿನಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದೆ. ತುಮಕೂರು ಜಿಲ್ಲೆಯಲ್ಲಿಯೂ ಬರೋಬ್ಬರಿ ೨೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಆದರೆ ಗೃಹ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರ ಸ್ವಕ್ಷೇತ್ರ ಕೊರಟಗೆರೆಯಲ್ಲಿಯೇ ಇಂದು ಮನಕಲಕುವ ಘಟನೆ ನಡೆದಿದೆ. ಪಿಯು ಪರೀಕ್ಷೆ ಬರೆಯಲು ಬಂದ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಕನಿಷ್ಠ ವೀಲ್ ಚೇರ್ ಸೌಲಭ್ಯ ಕೂಡ ಕಲ್ಪಿಸದ ಹಿನ್ನೆಲೆ, ವಿಶೇಷ ಚೇತನ ಮಗುವನ್ನು ತಾಯಿ ಎತ್ತಿಕೊಂಡೇ ಹೋಗಿ ಪರೀಕ್ಷಾ ಕೊಠಡಿಗೆ ಬಿಟ್ಟ ಘಟನೆ ನಡೆದಿದೆ.
ಕೊರಟಗೆರೆ ತಾಲೂಕಿನ 11 ಪಿಯುಸಿ ಕಾಲೇಜಿನ 897 ವಿದ್ಯಾರ್ಥಿಗಳಿಗೆ 33 ಕೊಠಡಿಗಳೊಳಗೆ ದ್ವೀತಿಯ ಪಿಯುಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಕೊರಟಗೆರೆ ಪಟ್ಟಣದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿಯೂ ಇಂದು ಪಿಯು ಪರೀಕ್ಷೆ ನಡೆಯುತ್ತಿದ್ದು, ಇಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಒಬ್ಬ ವಿಶೇಷ ಚೇತನ ವಿದ್ಯಾರ್ಥಿನಿ ಕೂಡ ಆಗಮಿಸಿದರು. ಆದರೆ ಈ ಪರೀಕ್ಷಾ ಕೇಂದ್ರದಲ್ಲಿ ಇಲಾಖೆ ವತಿಯಿಂದ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯವನ್ನು ಕೂಡ ಕಲ್ಪಿಸಿರಲಿಲ್ಲ. ಕನಿಷ್ಠ ಪಕ್ಷ ವೀಲ್ ಚೇರ್ ಕೂಡ ಅಲ್ಲಿರಲಿಲ್ಲ. ಹೀಗಾಗಿ ಕೊನೆಗೆ ವಿಶೇಷ ಚೇತನ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದ ತಾಯಿಯೇ ಮಗುವನ್ನು ಎತ್ತಿಕೊಂಡು ಹೋಗಿ ಪರೀಕ್ಷಾ ಕೇಂದ್ರದ ಬಳಿ ಬಿಟ್ಟಿದ್ದಾಳೆ. ಈ ದೃಶ್ಯ ಮನಕಲಕುವಂತಿತ್ತು.
ಎಸ್‌ಎಸ್‌ಎಲ್‌ಸಿ, ಪಿಯುಸಿಯಂತಹ ಬೋರ್ಡ್ ಎಕ್ಸಾಂಗಳಲ್ಲಿ ವಿಶೇಷ ಚೇತನ ಮಕ್ಕಳು ಮಾಡಿಕೊಂಡಿದ್ದಲ್ಲಿ ಅವರಿಗೆ ವೀಲ್ ಚೇರ್ ಸೌಲಭ್ಯ ಕಲ್ಪಿಸಬೇಕು ಅನ್ನೋ ನಿಯಮವಿದೆ. ಆದರೆ ಇಲಾಖೆಯ ನಿರ್ಲಕ್ಷ್ಯದಿಂದಾಗಿ ವಿಶೇಷ ಚೇತನ ವಿದ್ಯಾರ್ಥಿಗಳು ಮತ್ತವರ ಪೋಷಕರು ಪರದಾಡುವಂತಾಗಿದ್ದು ಮಾತ್ರ ವಿಪರ್ಯಾಸ.