ಕೊರಟಗೆರೆ :
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಆದೇಶದಂತೆ ಕೊರಟಗೆರೆ ತಾಲೂಕಿನ ಪತ್ರಕರ್ತರಿಗೆ ಆರೋಗ್ಯ ವಿಮೆ ವಿತರಿಸಲು ಕೊರಟಗೆರೆ ಪಟ್ಟಣ ಪಂಚಾಯ್ತಿ ಮುಂದಾಗಿದೆ. ಕೊರಟಗೆರೆ ಪಟ್ಟಣ ಪಂಚಾಯ್ತಿಯ ಉಳಿತಾಯ ಬಜೆಟ್ ಮಂಡನೆಯಾಗಿದ್ದು, ಈ ಬಜೆಟ್‌ನಲ್ಲಿ ಆರೋಗ್ಯ ವಿಮೆಗೆ ರೂ 5ಲಕ್ಷ ಹಣ ಮೀಸಲಿಡಲಾಗಿದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅನಿತಾ 2025-26 ನೇ ಸಾಲಿನ ಆಯವ್ಯಯ ಮಂಡನೆ ಮಾಡಿದರು. ಕೊರಟಗೆರೆ ಪಟ್ಟಣ ಪಂಚಾಯ್ತಿಯಿಂದ 9ಲಕ್ಷ ರೂಪಾಯಿ ಉಳಿತಾಯದ ಬಜೆಟ್ ಘೋಷಣೆಯಾಗಿದೆ. ಈ ವೇಳೆ 45 ವರ್ಷ ಮೇಲ್ಪಟ್ಟ ಕಾರ್ಯನಿರತ ಪತ್ರಕರ್ತರಿಗೆ ಪಟ್ಟಣ ಪಂಚಾಯ್ತಿಯಿಂದ ಆರೋಗ್ಯ ವಿಮೆ ಘೋಷಣೆ ಮಾಡಲಾಗಿದೆ. ಕೊರಟಗೆರೆ ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಪಟ್ಟಣ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಉಮೇಶ್ ಘೋಷಣೆ ಮಾಡಿದ್ದಾರೆ.
ಕಾರ್ಯನಿರತ ಪತ್ರಕರ್ತರ ಸಂಘದ ಕೊರಟಗೆರೆ ತಾಲೂಕು ಅಧ್ಯಕ್ಷ ಪುರುಷೋತ್ತಮ ಮಾತನಾಡಿ, ಪತ್ರಕರ್ತರಿಗೆ ಆರೋಗ್ಯ ವಿಮೆ ಘೋಷಣೆ ಮಾಡಿದ್ದಕ್ಕೆ ಗೃಹ ಸಚಿವರಿಗೆ ಮತ್ತು ಪಟ್ಟಣ ಪಂಚಾಯ್ತಿಗೆ ಧನ್ಯವಾದ ತಿಳಿಸಿದ್ದಾರೆ. ಸರ್ಕಾರದ 4ನೇ ಅಂಗವಾಗಿ ಕೆಲಸ ಮಾಡುವ ಪತ್ರಿಕರಿಗೆ ಯಾವುದೇ ಭದ್ರತೆಗಳಿಲ್ಲ. ಕೊನೆ ಪಕ್ಷ ಆರೋಗ್ಯಕ್ಕಾದರೂ ಒತ್ತನ್ನು ಕೊಡಿ ಎಂದು ಹಲವು ಬಾರಿ ರಾಜ್ಯ ಸಮ್ಮೇಳನಗಳಲ್ಲಿ ಕೇಳಿಕೊಂಡಿದ್ದೇವು. ಮಾನ್ಯ ಗೃಹ ಸಚಿವರು ಪತ್ರಕರ್ತರ ಬೇಡಿಕೆಯನ್ನು ಮನಗೊಂಡು ಇದೀಗ ಕೊರಟಗೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ 45 ವರ್ಷ ಮೇಲ್ಪಟ್ಟ ಪತ್ರಿಕರ್ತರಿಗೆ ಉಚಿತ ಆರೋಗ್ಯ ವಿಮೆ ಮಾಡಿಸಿಕೊಳ್ಳಲು ಪಟ್ಟಣ ಪಂಚಾಯಿತಿ ಬಜೆಟ್ ನಲ್ಲಿ 5 ಲಕ್ಷ ಹಣ ಮೀಸಲಿಟ್ಟಿರುವುದು ನಮ್ಮೆಲ್ಲರಿಗೂ ಸಂತೋಷ ಉಂಟು ಮಾಡಿದೆ. ಮುಂದಿನ ದಿನಗಳಲ್ಲಿ 45 ವರ್ಷವನ್ನು ಕಡಿತಗೊಳಿಸಿ ಎಲ್ಲಾ ಪತ್ರಕರ್ತರಿಗೆ ಆರೋಗ್ಯ ವಿಮೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.