ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಗೌರಿಕಲ್ಲು ಗ್ರಾಮದ ಸರ್ವೇ ನಂಬರ್ 32ರಲ್ಲಿ ಇರೋ ಕಲ್ಲುಕ್ವಾರೆ ಪುನಾರಂಭಕ್ಕಾಗಿ ಅರಣ್ಯ ಇಲಾಖೆಯ ಗಡಿಯನ್ನು ಮುಚ್ಚಿ ರಸ್ತೆ ನಿರ್ಮಾಣ ಮಾಡಲಾಗಿತ್ತು.. ಈ ಮೂಲಕ ಗಣಿಗಾರಿಕೆಗೆ ಅನುಕೂಲ ಮಾಡಿಕೊಡಲಾಗಿತ್ತು.. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ವರದಿ ಬಿತ್ತರಿಸಿದ್ದು, ವರದಿ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಜೆಸಿಬಿ ಮೂಲಕ ಗುಂಡಿ ಹಾಕಿ ರಸ್ತೆ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ,.
ಹೀರೆಬೆಟ್ಟ ರಕ್ಷಿತ ಅರಣ್ಯದ ಗಡಿಯನ್ನೇ ಮುಚ್ಚಿ ಗಣಿಗಾರಿಕೆಗೆ ಮಾಡಿದ ದಾರಿಯನ್ನೂ ಮುಲಾಜಿಲ್ಲದೇ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ತೆರವುಗೊಳಿಸಿದ್ದಾರೆ. ಕಲ್ಲುಕ್ವಾರೇ ಮತ್ತು ಕ್ರಷರ್ ಘಟಕಕ್ಕೆ ಹೋಗುವ ದಾರಿಯ ಸಂಪರ್ಕದ ಮಾರ್ಗವನ್ನು ಕಡಿತಗೊಳಿಸಿದ್ದಾರೆ.
ಇನ್ನು ಗೌರಿಕಲ್ಲು, ದೊಗ್ಗನಹಳ್ಳಿ, ಮಲ್ಲೇಕಾವು ಮತ್ತು ಗೊಲ್ಲರಹಟ್ಟಿಯ ನೂರಾರುಜನ ಬಂಡೇ ಕಾರ್ಮಿಕರು ಗೌರಿಕಲ್ಲಿನಲ್ಲಿ ಪ್ರಾರಂಭ ಆಗಿರುವ ಕಲ್ಲುಗಣಿಗಾರಿಕೆಯನ್ನು ವಿರೋಧಿಸಿ ತಹಶೀಲ್ದಾರ್ ಮಂಜುನಾಥ.ಕೆ. ಮನವಿ ಸಲ್ಲಿಸಿ ಕಲ್ಲುಕ್ವಾರೇ ಪ್ರಾರಂಭಕ್ಕೆ ವಿರೋಧ ವ್ಯಕ್ತಪಡಿಸಿದರು. ತಿಮ್ಲಾಪುರ ಅಭಯಾರಣ್ಯದ ಕರಡಿಧಾಮ ಮತ್ತು ಹಿರೇಬೆಟ್ಟ ರಕ್ಷಿತ ಅರಣ್ಯದ ಮಧ್ಯೆಭಾಗದಲ್ಲಿ ನೀಡಿರುವ ಕಲ್ಲುಕ್ವಾರೇ ಮತ್ತು ಕ್ರಷರ್ ಘಟಕಕ್ಕೆ ನೀಡಿರುವ ಅನುಮತಿಯನ್ನು ಸ್ಥಗಿತಗೊಳಿಸಬೇಕು. ಒಂದು ವೇಳೆ ಕಲ್ಲು ಕ್ವಾರೆಯಲ್ಲಿ ಬ್ಲಾಸ್ಟಿಂಗ್ ಪ್ರಾರಂಭವಾದ್ರೇ ಕಾಡಿನಲ್ಲಿ ವಾಸಿಸುವ ಪ್ರಾಣಿಗಳು ಗ್ರಾಮಕ್ಕೆ ಬರುವುದು ಖಚಿತ. ಮಾನ್ಯ ಜಿಲ್ಲಾಧಿಕಾರಿಗಳು ಮತ್ತೇ ಪರಿಶೀಲನೆ ನಡೆಸಿ ಬಂಡೇಕಾರ್ಮಿಕರಿಗೆ ಅನುಕೂಲ ಕಲ್ಪಿಸಬೇಕಿದೆ ಎಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ರು. ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಮಂಜುನಾಥ್, ಗೌರಿಕಲ್ಲು ಕಲ್ಲುಗಣಿಕೆ ಸ್ಥಳಕ್ಕೆ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸುತ್ತೇವೆ. ಅರಣ್ಯ ವ್ಯಾಪ್ತಿಗೆ ಬಂದರೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೀವಿ. ಬಂಡೆಕಾರ್ಮಿಕರ ಮನವಿಯನ್ನು ಸಹ ಪರಿಶೀಲನೆ ನಡೆಸುತ್ತೀವಿ ಎಂದು ಹೇಳಿದರು.