ಕೊಪ್ಪಳ:
ಕೊಪ್ಪಳದಲ್ಲಿನ ಬಿಎಸ್ ಪಿಎಲ್ ಕಾರ್ಖಾನೆಯ ನಿರ್ಮಾಣ ವಿರೋಧಿಸಿ ಮತ್ತು ಪರಿಸರ ರಕ್ಷಣೆಗಾಗಿ ವಿವಿಧ ಸಂಘಟನೆಗಳು ಸೇರಿ ಇಂದು ಪ್ರತಿಭಟನೆಯನ್ನು ನಡೆಸುತ್ತಿವೆ, ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕೊಪ್ಪಳ ತಾಲೂಕು ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಿ ಕ್ಷೇತ್ರ ಶಿಕ್ಷಾಣಾಧಿಕಾರಿ ಶಂಕರಯ್ಯ ಟಿ. ಎಸ್. ಆದೇಶ ಹೊರಡಿಸಿದ್ದಾರೆ.
ಈ ಬಂದ್ ಅನ್ನು ಶಾಂತಿಯುತವಾಗಿ ಮಾಡಲು ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ತೀರ್ಮಾನಿಸಲಾಗಿದೆ. ಕೊಪ್ಪಳ ನಗರಕ್ಕೆ ಹೊಂದಿಕೊಂಡು ಈ ಕಾರ್ಖಾನೆ ನಿರ್ಮಿಸಲಾಗಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಕೊಪ್ಪಳ ಬಂದ್ ಹಿನ್ನೆಲೆಯಲ್ಲಿ ನಗರದ ವಕೀಲರುಗಳು ನ್ಯಾಯಲಯದ ಕಲಾಪದಿಂದ ದೂರ ಉಳಿದು ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಗವಿಮಠದ ಆವರಣದಲ್ಲಿ ಸಾವಿರಾರು ಜನರು ಸೇರಿ ಉಕ್ಕಿನ ಕಾರ್ಖಾನೆ ವಿರುದ್ದ ಘೋಷಣೆಗಳನ್ನು ಕೂಗಿದ್ದಾರೆ.
ಬಂದ್ ನಲ್ಲಿ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ್ ಹಿಟ್ನಾಳ, ಬಿಜೆಪಿ ಶಾಸಕ ಜನಾರ್ಧನ ರೆಡ್ಡಿ, ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಂಸದ ರಂಗಣ್ಣ ಕರಡಿ ಮತ್ತು ಬಿಜೆಪಿ ರಾಜ್ಯ ಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಸೇರಿದಂತೆ ಎಲ್ಲ ಪಕ್ಷದ ಮುಖಂಡರುಗಳು ಪಾಲ್ಗೊಂಡಿದ್ದಾರೆ.