ISRO : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ 101ನೇ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ. ಮೇ 18ರಂದು ತಮಿಳುನಾಡಿನ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-C61/EOS-09 ಉಡಾವಣೆಯು ನಡೆಯಲಿದೆ. ಈ ಕಾರ್ಯಾಚರಣೆಯಲ್ಲಿ ಸೂರ್ಯನ ಸಿಂಕ್ರೊನಸ್ ಧ್ರುವ ಕಕ್ಷೆಯಲ್ಲಿ ಈ ಉಪಗ್ರಹವನ್ನು ಇರಿಸಲಾಗುವುದು.
ಈ ಉಪಗ್ರಹ ಉಡಾವಣೆ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಇನ್ನೊಂದು ಮಹತ್ವದ ಹೆಜ್ಜೆಯಾಗಿದ್ದು, ಈ ಉಪಗ್ರಹವು ಭೂಮಿಯ ಮೇಲ್ಮೈ ಗಮನಿಸುವಲ್ಲಿ ಸಹಕಾರಿಯಾಗಲಿದೆ. ಈ ಉಪಗ್ರಹದಿಂದ ಕೃಷಿ, ಅರಣ್ಯ, ಪರಿಸರ ಸಂರಕ್ಷಣಾ ಕಾರ್ಯಗಳಿಗೆ ಅಗತ್ಯವಾದ ಮಹತ್ವದ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಲಿದೆ.
ಈ ಉಪಗ್ರಹವು ಸಿಂಥೆಟಿಕ್ ಅಪರ್ಚರ್ ರಾಡಾರ್ ಅನ್ನು ಹೊಂದಿದ್ದು, 1696.24 ಕೆಜಿ. ತೂಕವಿದ್ದು, ಇದ್ರ ಜೀವಿತಾವಧಿ ಐದು ವರ್ಷಗಳಾಗಿದ್ದು, ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಹಗಲು-ರಾತ್ರಿ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳ ಸೆರೆಹಿಡಿಯಲು ಇದು ಉಪಕಾರಿಯಾಗಿದೆ.
ನಾಳೆ ಬೆಳಗ್ಗೆ 5.59ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಉಪಗ್ರಹ ಉಡಾವಣೆ ನಿಗದಿಯಾಗಿದ್ದು, ಈ ಐತಿಹಾಸಿಕ ಕ್ಷಣವನ್ನು ನೇರವಾಗಿ ವೀಕ್ಷಿಸಲು ಇಸ್ರೋ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ವ್ಯವಸ್ಥೆ ಮಾಡಿದೆ.