ತುಮಕೂರು:
ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿವೆ. ಜಿಲ್ಲೆಯಲ್ಲಿ ಒಟ್ಟು 35 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಒಟ್ಟು 25,768 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ವಿಜ್ಞಾನ ವಿಭಾಗದಿಂದ 9088 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಿಂದ ೧೦೨೧೭ ವಿದ್ಯಾರ್ಥಿಗಳು ಹಾಗೂ ಕಲಾ ವಿಭಾಗದಲ್ಲಿ ಒಟ್ಟು 5977ವಿದ್ಯಾರ್ಥಿಗಳು ಪರೀಕ್ಷೆಯನ್ನ ಬರೆಯಲಿದ್ದಾರೆ. ವರ್ಷವಿಡೀ ಅಭ್ಯಾಸ ನಡೆಸಿರುವ ವಿದ್ಯಾರ್ಥಿಗಳು ಇವತ್ತಿನಿಂದ ಪರೀಕ್ಷೆ ಬರೆಯುತ್ತಿದ್ದಾರೆ.
ಇನ್ನು ಯಾವುದೇ ಕಾರಣಕ್ಕೂ ಪರೀಕ್ಷೆಯಲ್ಲಿ ನಕಲು ನಡೆಯಬಾರದು ಅನ್ನೋ ಕಾರಣಕ್ಕೆ ಇದೇ ಮೊದಲ ಬಾರಿಗೆ ಪಿಯು ಪರೀಕ್ಷೆಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ. ಪ್ರತಿಯೊಂದು ಪರೀಕ್ಷಾ ಕೊಠಡಿಗೂ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಲಾಗಿದ್ದು, ಸಿಸಿಟಿವಿ ಕಣ್ಗಾವಲಿನ ಮೂಲಕ ನೇರ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲಾಗಿದೆ.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಸಮನ್ವಯದಲ್ಲಿ ಪರೀಕ್ಷೆಗಳ ನಿರ್ವಹಣೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಅನಗತ್ಯ ಜನಸಂದಣಿ, ಪೋಷಕರು ಅಥವಾ ಅತಿಥಿಗಳ ಪ್ರವೇಶ, ಮತ್ತು ಮೊಬೈಲ್ ಬಳಕೆಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.