HYDERABAD: ತೆಲಂಗಾಣದ ಖ್ಯಾತ ಜಾನಪದ ಗಾಯಕಿ ಮಂಗ್ಲಿ ಅವರ ಹುಟ್ಟುಹಬ್ಬದ ಪಾರ್ಟಿ ಇದೀಗ ಮಾದಕ ದ್ರವ್ಯ ದಂಧೆ ಸಂಬಂಧಿತ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಈ ಕುರಿತಂತೆ ಪೊಲೀಸರು ದಾಳಿಯನ್ನು ನಡೆಸಿದ್ದಾರೆ.
ಈ ಘಟನೆ ರಂಗಾರೆಡ್ಡಿ ಜಿಲ್ಲೆಯ ತ್ರಿಪುರ ರೆಸಾರ್ಟ್ನಲ್ಲಿ ನಡೆದಿದೆ. ಮಂಗ್ಲಿ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಒಟ್ಟು 48 ಮಂದಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ಪಾರ್ಟಿಗೆ ಸಂಬಂಧಿಸಿದ ಗುಪ್ತ ಮಾಹಿತಿ ಆಧಾರದಲ್ಲಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಇನ್ನು ದಾಳಿಯ ವೇಳೆ, ಸ್ಥಳದಲ್ಲಿ ಇದ್ದ ಎಲ್ಲರಿಗೂ ಮಾದಕ ದ್ರವ್ಯ ಸೇವನೆ ಪರೀಕ್ಷೆ (ಡ್ರಗ್ ಟೆಸ್ಟ್) ಮಾಡಲಾಯಿತು. ಅದರಲ್ಲಿ ಒಟ್ಟು 9 ಮಂದಿಗೆ ಪಾಸಿಟಿವ್ ವರದಿ ಬಂದಿರುವುದು ಮಾದಕ ದ್ರವ್ಯ ಬಳಕೆಯ ಗಂಭೀರತೆಯನ್ನು ಬಿಂಬಿಸುತ್ತದೆ.
ಪಾರ್ಟಿಯಲ್ಲಿ ಉಪಯೋಗಿಸಲಾದ ವಿದೇಶಿ ಮದ್ಯವನ್ನು ಪೊಲೀಸರು ಜಪ್ತಿ ಮಾಡಿದ್ದು, ಸ್ಥಳದಲ್ಲಿದ್ದ ನೂರಾರು ಮೌಲ್ಯದ ಆಲ್ಕೋಹಾಲ್ ಬಾಟಲಿಗಳೂ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪೊಲೀಸರು ಎನ್ಡಿಪಿಎಸ್ ಕಾಯಿದೆ (NDPS Act) ಹಾಗೂ ಶಬ್ದ ಮಾಲಿನ್ಯ ನಿಯಮಗಳಡಿ ಪ್ರಕರಣ ದಾಖಲಿಸಿದ್ದಾರೆ. ಮಂಗ್ಲಿ ಸೇರಿದಂತೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಎಲ್ಲರ ವಿರುದ್ಧ ವಿಚಾರಣೆ ನಡೆಯಲಿದೆ ಎಂದು ಮೂಲಗಳು ತಿಳಿಸುತ್ತಿವೆ.
ಮಂಗ್ಲಿ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರದಲ್ಲಿನ "ಕಣ್ಣು ಹೊಡಿಯಾಕ" ಗೀತೆಯ ಮೂಲಕ ಕನ್ನಡದಲ್ಲಿಯೂ ಅವರು ಖ್ಯಾತರಾಗಿದ್ದಾರೆ.