ಪಾವಗಡ :
ಇಂದು ಎಲ್ಲೆಡೆ ಪವಿತ್ರ ರಂಜಾನ್ ಹಬ್ಬದ ಸಂಭ್ರಮ- ಸಡಗರ ಮನೆ ಮಾಡಿದೆ. ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭ ಹಾರೈಸಿಕೊಂಡಿದ್ದರು. ಇತ್ತ ಪಾವಗಡದಲ್ಲೂ ರಂಜಾನ್ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಪಾವಗಡ ಪಟ್ಟಣದ ಎಂಟು ಮಸೀದಿಗಳ ಮೌಲ್ವಿಗಳು ಹಾಗೂ ಮುಸ್ಲಿಂ ಬಾಂಧವರು ಬೆಳಗ್ಗೆ ಎಂಟು ಗಂಟೆಗೆ ಪಟ್ಟಣದ ಪಶು ಇಲಾಖೆ ಮುಂಭಾಗದಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಅಲ್ಲಿಂದ ಈದ್ಗಾ ಮೈದಾನದವರೆಗೂ ಮೆರವಣಿಗೆ ಮೂಲಕ ತೆರಳಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಒಬ್ಬರಿಗೊಬ್ಬರು ಶುಭಕೋರಿಕೊಂಡರು. ಈ ವೇಳೆ ಮುಸ್ಲಿಂ ಬಾಂಧವರಿಗೆ ಪಿಎಸ್‌ಐ ಸುರೇಶ್ ಶುಭಾಶಯ ತಿಳಿಸಿದರು. ಪ್ರಾರ್ಥನೆಯಲ್ಲಿ ನೂರಾರು ಮಂದಿ ಹಿರಿಯ ಮುಸ್ಲಿಂ ಮುಖಂಡರು, ಪುಟ್ಟ ಪುಟ್ಟ ಮಕ್ಕಳು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದು ಅಲ್ಲಾಹುನ ಸ್ಮರಣೆಯಲ್ಲಿ ಮಗ್ನರಾಗಿದ್ದರು.
ಮುಸ್ಲಿಂ ಬಾಂಧವರ ಒಂದು ತಿಂಗಳ ಉಪವಾಸ ಇಂದು ಅಂತ್ಯವಾಗಿದ್ದು, ಪ್ರಥಮ ದಿನ ಸ್ನಾನಮಾಡಿ, ಶುಭ್ರ ಬಟ್ಟೆ ತೊಟ್ಟು ಸುವಾಸನೆ ಹಚ್ಚಿಕೊಂಡು ಅಲ್ಲಾನನ್ನು ಸ್ಮರಿಸುತ್ತಾ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಷ್ಟು ವಿಶೇಷವಾಗಿತ್ತು.