ಕೊಡಗು : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಐಗೂರು ಗ್ರಾಮಪಂಚಾಯತ್ ವ್ಯಾಪ್ತಿಯ ಯಡವಾರೆ ಗ್ರಾಮದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಕೊಂಡಿರುವ ಘಟನೆ ನಡೆದಿದೆ.
ಮೃತನನ್ನು ನಾರೂರು ಮನೆ ಮಧು, [ಅಶೋಕ್] ಎಂದು ಗುರುತಿಸಲಾಗಿದೆ. ಇನ್ನು ಮೃತ ವ್ಯಕ್ತಿ ಮಧು ತನ್ನ ಮನೆಯಲ್ಲಿಯೇ ಡಬ್ಬಲ್ ಬ್ಯಾರೆಲ್ ಗನ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಮೂರು ವರ್ಷದ ಪುತ್ರಿಗೆ ಅನಾರೋಗ್ಯವಾಗಿದ್ದ ಹಿನ್ನೆಲೆಯಲ್ಲಿ, ಒಂದು ವಾರದ ಹಿಂದೆ ಪತ್ನಿ ಹಾಗೂ ಪುತ್ರಿ ಬೆಂಗಳೂರಿಗೆ ತೆರಳಿದ್ದರು. ಭಾನುವಾರ ಬೆಳಗ್ಗೆ ಮಧು ಅವರ ತಾಯಿ ಕೂಡ ಬೆಂಗಳೂರಿಗೆ ಹೊರಟಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮದ್ಯ ಸೇವಿಸಿ ತಲೆಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನು ಘಟನೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.