KODAGU : ಹಾರಂಗಿ ಜಲಾಶಯ ಬಹುತೇಕ ಭರ್ತಿ | ಮೊದಲ ಬಾರಿಗೆ ಮೇ ಅಂತ್ಯದಲ್ಲಿ ಹೆಚ್ಚು ಪ್ರಮಾಣದ ನೀರು ಸಂಗ್ರಹ

KODAGU NEWS : ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನಲೆ ಹಾರಂಗಿ ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಇದರಿಂದಾಗಿ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮೇ ತಿಂಗಳಾಂತ್ಯದಲ್ಲಿಯೇ ಇಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ.

ಪ್ರಸ್ತುತ ಜಲಾಶಯವು ಪೂರ್ಣ ಭರ್ತಿಯಾಗಲು ಕೇವಲ 13 ಅಡಿ ಬಾಕಿಯಿದೆ. ಸಾಮಾನ್ಯವಾಗಿ ಹಾರಂಗಿ ಜಲಾಶಯ ಜುಲೈ ಅಂತ್ಯ ಅಥವಾ ಆಗಸ್ಟ್ ತಿಂಗಳಲ್ಲಿ ಭರ್ತಿಯಾಗುತ್ತಿತ್ತು. ಆದರೆ ಈ ಬಾರಿ ಮೇ ಅಂತ್ಯದಲ್ಲಿಯೇ ಇಂತಹ ಮಟ್ಟದ ನೀರಿನ ಸಂಗ್ರಹಣೆಯು ಅಚ್ಚರಿ ಮೂಡಿಸಿದೆ. ಇದೀಗ ದಿನಕ್ಕೆ 2,000 ಕ್ಯೂಸೆಕ್ಸ್‌ಗಿಂತ ಅಧಿಕ ನೀರು ಒಳಹರಿಯುತ್ತಿರುವುದರಿಂದ, ಮುಂದಿನ 4–5 ಅಡಿಗಳು ತುಂಬಿದ ತಕ್ಷಣವೇ ನೀರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇನ್ನು ನಿರಂತರ ಮಳೆಯ ಅಬ್ಬರ ಕೊಂಚ ಕಡಿಮೆಯಾದರೂ, ಕಡತ ಮಳೆಯ ಪ್ರಭಾವ ಇನ್ನೂ ಮುಂದುವರಿದಿದ್ದು, ಆಗೊಮ್ಮೆ ಈಗೊಮ್ಮೆ ಧಾರಾಕಾರ ಮಳೆಯಾಗುತ್ತಿದೆ. ಹಾರಂಗಿ ಜಲಾಶಯದ  ಅಧಿಕಾರಿಗಳ ಮಾಹಿತಿ ಪ್ರಕಾರ, ನೀರಿನ ಮಟ್ಟ ಮುಂದುವರಿದರೆ ಇಂದು ಅಥವಾ ಬುಧವಾರ ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ನೀರು ಬಿಡುಗಡೆ ಮಾಡಬಹುದು. ಈ ಹಿನ್ನೆಲೆಯಲ್ಲಿ ನದಿಪಾತ್ರದ ಜನರು ತಮ್ಮ ಜಾನುವಾರು ಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಬೇಕು ಮತ್ತು ಯಾವುದೇ ಸಮಯದಲ್ಲಾದರೂ ನೀರು ಬಿಡಬಹುದು ಎಂಬ ಎಚ್ಚರಿಕೆಯಲ್ಲಿ ಇರಬೇಕು. ಈ ವರ್ಷದ ಅಸಾಧಾರಣ ಮಳೆಯ ಹಿನ್ನೆಲೆಯಲ್ಲಿ, ಹಾರಂಗಿ ಜಲಾಶಯದಲ್ಲಿ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿ ಮೇ ತಿಂಗಳಲ್ಲಿಯೇ ಭರ್ತಿಯ ಹಂತ ತಲುಪಿರುವುದು ಗಂಭೀರ ಪರಿಸ್ಥಿತಿಯನ್ನೇ ಸೂಚಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.

 

 

 

Author:

...
Keerthana J

Copy Editor

prajashakthi tv

share
No Reviews